ನವದೆಹಲಿ: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಟೀಂ ಇಂಡಿಯಾ ಮಾಜಿ ನಾಯಕ, ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೋರ್ಟಿಸ್ ಎಸ್ಕಾರ್ಟ್ಸ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಕಾರ್ಡಿಯಾಲಜಿ ವಿಭಾಗದ ನಿರ್ದೇಶಕರು, 'ಸದ್ಯ ಕಪಿಲ್ ದೇವ್ ಗುಣಮುಖರಾಗಿದ್ದು, ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ' ಎಂದು ತಿಳಿಸಿದ್ದಾರೆ.
ಭಾರತಕ್ಕೆ ಮೊಟ್ಟಮೊದಲ ಕ್ರಿಕೆಟ್ ವಿಶ್ವ ಕಪ್ ತಂದುಕೊಟ್ಟ ಮಾಜಿ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಅವರ ಆರೋಗ್ಯ ಚೇತರಿಕೆಗೆ ದೇಶಾದ್ಯಂತ ಅಭಿಮಾನಿಗಳ ಹಾರೈಕೆಯ ಕೂಗು ಕೇಳಿ ಬಂದಿತ್ತು. ದಿಗ್ಗಜ ಆಟಗಾರನಿಗೆ ಆಯಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರ ತಂಡ ಆಪರೇಶನ್ ಸಕ್ಸೆಸ್ ಆದ ಹಿನ್ನೆಲೆಯಲ್ಲಿ ಗೆಲುವಿನ ನಗೆ ಬೀರಿದ್ದರು.
ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಒಂದು ದಶಕಕ್ಕೂ ಹೆಚ್ಚು ಕಾಲ ಟೀಂ ಇಂಡಿಯಾ ಪರ ಆಡಿದ್ದಾರೆ. ಅವರು ಅಕ್ಟೋಬರ್ 1, 1978 ರಂದು ಕ್ವೆಟ್ಟಾದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆ ತಿಂಗಳ ಕೊನೆಯಲ್ಲಿ ಫೈಸಲಾಬಾದ್‌ನಲ್ಲಿ ಟೆಸ್ಟ್ ಚೊಚ್ಚಲ ಪ್ರವೇಶ ಮಾಡಿದ್ದರು.
ಕಪಿಲ್ ದೇವ್ ಟೀಂ ಇಂಡಿಯಾ ಪರ 131 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 434 ವಿಕೆಟ್ ಪಡೆದಿದ್ದಷ್ಟೇ ಅಲ್ಲದೆ 5,248 ರನ್ ಗಳಿಸಿದ್ದಾರೆ. 225 ಏಕದಿನ ಪಂದ್ಯಗಳಲ್ಲಿ 3,783 ರನ್ ಗಳಿಸಿದ್ದು, 253 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 1983ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದ ಕಪಿಲ್ ದೇವ್ ಭಾರತವನ್ನು ಚಾಂಪಿಯನ್ ತಂಡವಾಗಿ ಮಾಡಿದ್ದರು.
PublicNext
25/10/2020 06:11 pm