ಶಾರ್ಜಾ: ಕ್ವಿಂಟನ್ ಡಿ ಕಾಕ್ ಹಾಗೂ ಇಶನ್ ಕಿಶನ್ ಅಬ್ಬರ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 10 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್-13ನೇ ಆವೃತ್ತಿಯ 41ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ 114 ರನ್‌ಗಳ ಸಾಧಾರಣ ಮೊತ್ತದ ಗುರಿ ನೀಡಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಮುಂಬೈ ಯಾವುದೇ ವಿಕೆಟ್ ನಷ್ಟವಿಲ್ಲದೆ 12.2 ಓವರ್‌ಗಳಲ್ಲಿ 116 ರನ್ ಚಚ್ಚಿ ಭರ್ಜರಿ ಗೆಲುವು ದಾಖಲಿಸಿದೆ.
ಮುಂಬೈ ಇಂಡಿಯನ್ಸ್ ಪರ ಇಶನ್ ಕಿಶನ್ 68 ರನ್ (37 ಎಸೆತ, 6 ಬೌಂಡರಿ, 5 ಸಿಕ್ಸರ್) ಹಾಗೂ ಕ್ವಿಂಟನ್ ಡಿ ಕಾಕ್ 46 ರನ್ (37 ಎಸೆತ, 5 ಬೌಂಡರಿ, 2 ಸಿಕ್ಸರ್) ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಸಿಎಸ್‌ಕೆ 9 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಿತ್ತು. ತಂಡದ ಪರ ಸ್ಯಾಮ್ ಕರ್ರನ್ 52 ರನ್ (47 ಎಸೆತ, 4 ಬೌಂಡರಿ, 2 ಸಿಕ್ಸರ್) ಹೊರತುಪಡಿಸಿ ಉಳಿದ ಆಟಗಾರರು ವೈಪಲ್ಯ ಮೆರೆದಿದ್ದರು. ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 4 ವಿಕೆಟ್ ( 4 ಓವರ್, 1 ಮೇಡನ್, 18 ರನ್), ಜಸ್‌ಪ್ರೀತ್ ಬುಮ್ರಾ, ರಾಹುಲ್ ಚಹರ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ನಾಥನ್ ಕೌಲ್ಟರ್-ನೈಲ್ ಒಂದು ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು. ಕ್ರುನಾಲ್ ಪಾಂಡ್ಯ ಯಾವುದೇ ವಿಕೆಟ್ ಪಡೆಯದಿದ್ದರೂ ರನ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
PublicNext
23/10/2020 10:32 pm