ಶಾರ್ಜಾ: ಶುಭ್‌ಮನ್ ಗಿಲ್ ಹೊರತುಪಡಿಸಿ ಉಳಿದೆಲ್ಲ ಆಟಗಾರರು ಬ್ಯಾಟಿಂಗ್ ವೈಫಲ್ಯ ತೋರಿದ ಪರಿಣಾಮ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 82 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ನ 28ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಪಡೆ ಕೆಕೆಆರ್ ಗೆ 194 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಕೆಕೆಆರ್ ಪರ ಶುಭ್‌ಮನ್ ಗಿಲ್ (34 ರನ್) ಹೊರತುಪಡಿಸಿ ಉಳಿದ ಎಲ್ಲ ಆಟಗಾರರು 20 ರನ್‌ಗಳ ಗಡಿದಾಟಲಿಲ್ಲ. ಇದರಿಂದಾಗಿ ದಿನೇಶ್ ಕಾರ್ತಿಕ್ ಪಡೆಯು 9 ವಿಕೆಟ್ ನಷ್ಟಕ್ಕೆ ಕೇವಲ 112 ರನ್ ಮಾತ್ರವೇ ಗಳಿಸಲು ಶಕ್ತವಾಯಿತು.
ಮಿಂಚಿದ ಆರ್‌ಸಿಬಿ ಬೌಲಿಂಗ್ ಪಡೆ: ವಾಷಿಂಗ್ಟನ್ ಸುಂದರ್ ಹಾಗೂ ಕ್ರಿಸ್ ಮೊರಿಸ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರೆ, ಯಜುವೇಂದ್ರ ಚಹಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಶಿವಂ ದುಬೆ ತಲಾ ಒಂದು ಕಿತ್ತು ತಂಡಕ್ಕೆ ಆಸರೆಯಾದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ ಪಡೆ 2 ವಿಕೆಟ್ ನಷ್ಟಕ್ಕೆ 194 ರನ್‌ಗಳನ್ನು ಪೇರಿಸಿತ್ತು. ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್ ಅಜೇಯ 73 ರನ್ (33ಎಸೆತ, 5 ಬೌಂಡರಿ, 6 ಸಿಕ್ಸರ್), ಆ್ಯರೋನ್ ಫಿಂಚ್ 47 ರನ್ (37 ಎಸೆತ, 4 ಬೌಂಡರಿ, 1 ಸಿಕ್ಸ್), ದೇವದತ್ತ ಪಡಿಕ್ಕಲ್ 32 ರನ್ (23 ಎಸೆತ, 4 ಬೌಂಡರಿ, 1 ಸಿಕ್ಸ್), ವಿರಾಟ್ ಕೊಹ್ಲಿ ಅಜೇಯ 33 ರನ್ (28 ಎಸೆತ, 1 ಬೌಂಡರಿ) ಚಚ್ಚಿದ್ದರು.
PublicNext
12/10/2020 11:15 pm