ಶಿವಮೊಗ್ಗ : ಅದೆಷ್ಟೋ ಜನರು ತಮ್ಮ ತಂದೆ-ತಾಯಿ ಬದುಕಿದ್ದಾಗ ಸರಿಯಾಗಿ ನೋಡಿಕೊಳ್ಳದೇ, ತಿರಸ್ಕಾರ ಮನೋಭಾವದಿಂದ ಕಾಣುವುದು ನೋಡುತ್ತಲೇ ಬರುತ್ತಿದ್ದೆವೆ. ಅನಾಥಾಶ್ರಮಕ್ಕೆ ಬಿಟ್ಟು ಬರೋದು ಕೂಡ ನೋಡಿದ್ದೆವೆ, ಕೇಳಿದ್ದೆವೆ.
ಆದ್ರೆ, ಇಲ್ಲೊಬ್ಬ ತಾಯಿಗೆ ತಕ್ಕ ಮಗ ತನ್ನ ತಾಯಿಗೋಸ್ಕರ ಗುಡಿಯೇ ನಿರ್ಮಾಣ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ತನ್ನ ತಾಯಿ ಆಸ್ಪತ್ರೆಗೆ ದಾಖಲಾದಾಗ ತಾವು ಕೂಡ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲದೇ, ಇದೀಗ ತಾಯಿಯನ್ನು ಕಳೆದುಕೊಂಡು ಪ್ರತಿದಿನ ಪೂಜಿಸುತ್ತಾರೆ. ಗುಡಿಗೆ ಬಂದು ನಮಸ್ಕರಿಸುತ್ತಾರೆ.
ಹೌದು, ಹೀಗೆ ದುಖಃದಲ್ಲಿ ನಿಂತು ತನ್ನ ತಾಯಿಯನ್ನು ನೆನೆಯುತ್ತಿರುವ ಇವರ ಹೆಸರು ಹಾಲೇಶ್. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ನಿವಾಸಿ. 7ನೇ ತರಗತಿ ವ್ಯಾಸಾಂಗ ಮಾಡಿರುವ ಇವರು, ತನ್ನ ತಾಯಿಗೋಸ್ಕರ ವಿದ್ಯಾಭ್ಯಾಸ ತ್ಯಜಿಸಿ, ಬಸವಪಟ್ಟಣದಿಂದ ಭದ್ರಾವತಿಯಲ್ಲಿ ಕೂಲಿ ಮಾಡಲು ನೆಲೆಸಿದ್ದ ಹಾಲೇಶ್ ಗೆ ತನ್ನ ತಾಯಿಯನ್ನು ಕಂಡರೆ, ಅಪಾರ ಪ್ರೀತಿ, ವಾತ್ಸಲ್ಯ, ಜೊತೆಗೆ ಭಕ್ತಿ ಕೂಡ ಕಾಣಬಹುದು.
ಇದೇ ಹಾಲೇಶ್ ತನ್ನ ತಾಯಿಯನ್ನು ಕಳೆದುಕೊಂಡು ಇದೀಗ ಅವರಿಗಾಗಿಯೇ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ದೇವಾಲಯ ನಿರ್ಮಿಸಿ, ತಾಯಿಯನ್ನು ದಿನವೂ ನೆನೆಯುತ್ತಿದ್ದಾರೆ. ದಿನವೂ ಬಂದು ಪೂಜೆ ನೆರವೇರಿಸುತ್ತಿರುವ ಹಾಲೇಶ್, ದೂರದ ರಾಜಸ್ಥಾನದಿಂದ ಗ್ರಾನೈಟ್ ನಲ್ಲಿ ತನ್ನ ತಾಯಿಯ ಭಾವಚಿತ್ರವನ್ನು ರಚಿಸಿ ತರಿಸಿ, ಗುಡಿಯಲ್ಲಿರಿಸಿದ್ದಾರೆ.
ಇನ್ನು ಹಾಲೇಶ್ ಅವರು ತಮ್ಮ ಸಣ್ಣದಾದ ತೋಟದಲ್ಲಿಯೇ, ತಾಯಿಯ ಗುಡಿಯನ್ನು ನಿರ್ಮಿಸಿ, ಅಲ್ಲಿ ತನ್ನ ತಾಯಿಗೆ ಇಷ್ಟವಾಗುತ್ತಿದ್ದ ಫಾಲ್ಸ್, ವಿವಿಧ ಜಾತಿಯ ಹೂವಿನ ಸಸಿಗಳನ್ನು ನೆಟ್ಟು ಕೇವಲ ಗುಡಿಯೊಂದೇ ನಿರ್ಮಾಣ ಮಾಡದೇ ತನ್ನ ತಾಯಿಯ ಆಸೆಯನ್ನೆಲ್ಲಾ, ಅವರನ್ನು ಕಳೆದುಕೊಂಡ ಬಳಿ ಈಡೇರಿಸುತ್ತಿದ್ದಾರೆ.
ಅಂದಹಾಗೆ, ಹಾಲೇಶ್ ಅವರ ತಾಯಿಯ ಆಸೆ, ಅವರ ಮೇಲೆ ಇರುವ ಗೌರವ, ಭಕ್ತಿಯನ್ನು ಹಾಲೇಶ್ ಅವರ ಗೆಳೆಯರು ಶ್ಲಾಘಿಸುತ್ತಾರೆ. ತಾಯಿಯೇ ದೇವರು, ತಾಯಿಯೇ ಎಲ್ಲಾ, ಎನ್ನುವ ಮಾತಿನಂತೆ, ಭೂಮಿಯಲ್ಲಿರುವ ಅತ್ಯುನ್ನತ ವಸ್ತುಗಳಲ್ಲಿ ತಾಯಿಗೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಆಕೆಯ ಋಣವನ್ನು ಸಹ ತೀರಿಸಲು ಸಾಧ್ಯವಿಲ್ಲ.
ಪ್ರಸ್ತುತ ಹಾಲೇಶ್ ತಾಯಿಗಾಗಿ ಸುಂದರವಾದ ಗುಡಿ ನಿರ್ಮಿಸಿ, ತಾಯಿಗೆ ತಕ್ಕ ಮಗ ಎನಿಸಿಕೊಂಡಿದ್ದಾರೆ. ಪೋಷಕರನ್ನು ತಾತ್ಸಾರ ಮನೋಭಾವದಿಂದ ಕಾಣುವ ಎಲ್ಲರಿಗೂ ಇವರು, ಅನುಕರಣೀಯ.
PublicNext
19/09/2022 08:25 pm