ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಮಲೆನಾಡಿನಲ್ಲಿ ಐಸಿಸ್‌ ಉಗ್ರರ ಕರಿನೆರಳು!; ಶಂಕಿತರ ಸೆರೆ, ತೀವ್ರ ವಿಚಾರಣೆ

ಶಿವಮೊಗ್ಗ: ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಐಸಿಸ್‌ ಉಗ್ರರ ಕರಿನೆರಳ ಛಾಯೆ ಕಾಣಿಸಿಕೊಂಡಿದೆ! ಐಸಿಸ್​ ಸಂಘಟನೆ ಜೊತೆ ನಂಟು ಹೊಂದಿರುವ ಆರೋಪದಡಿ ಶಿವಮೊಗ್ಗ ಪೊಲೀಸರು ಇಬ್ಬರು ಶಂಕಿತರನ್ನು ಬಂಧಿಸಿದ್ಧು, ಓರ್ವ ಪರಾರಿಯಾಗಿದ್ದಾನೆ. ನಾಲ್ವರ ವಿರುದ್ಧ ಎಫ್.ಐ.ಆರ್. ದಾಖಲಾಗಿದೆ. ಇವರನ್ನ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್​ ಒಪ್ಪಿಸಿದ್ದು, ಗೃಹಮಂತ್ರಿ ತವರಿನಲ್ಲಿ ಉಗ್ರರ ಚಟುವಟಿಕೆ ಗರಿಗೆದರಿದೆ. ಇದು ಮಲೆನಾಡಿಗರನ್ನು ಆತಂಕಕ್ಕೆಡೆ ಮಾಡಿಕೊಟ್ಟಿದೆ.

ಪೊಲೀಸರು ಸ್ವಲ್ಪ ಯಾಮಾರಿದ್ರೂ ರಾಜ್ಯದ ಕೆಲವು ಕಡೆ ಬಾಂಬ್ ಬ್ಲಾಸ್ಟ್ ನಡೆಯುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ. ಪೊಲೀಸರ ತನಿಖೆಯಲ್ಲಿ ಈ ಬಾಂಬ್ ಗ್ಯಾಂಗ್ ಅಸಲಿಯತ್ತು ಅನಾವರಣಗೊಂಡಿದೆ. ಈ ಐಸಿಸ್ ಉಗ್ರರ ಜೊತೆ ಶಿವಮೊಗ್ಗ ಮತ್ತು ಮಂಗಳೂರು ಲಿಂಕ್ ಜೋಡಣೆಯಾಗಿದ್ದು, ಬಾಂಬ್ ಬ್ಲಾಸ್ಟ್ ಸೇರಿದಂತೆ ಉಗ್ರ ಚಟುವಟಿಕೆಗಳ ಬಗ್ಗೆ ಈ ಗ್ಯಾಂಗ್ ಟ್ರೈನಿಂಗ್ ಪಡೆದಿದ್ದರು ಎಂದು ಹೇಳಲಾಗುತ್ತಿದೆ.

ಈ ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರ ಬಗ್ಗೆ ಪೊಲೀಸರಿಗೆ ಸಾಕ್ಷಿ ಲಭ್ಯವಾಗಿದ್ದು, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಲ್ವರು ಶಂಕಿತ ಉಗ್ರರ ಮೇಲೆ ಎಫ್ ಐಆರ್. ದಾಖಲಾಗಿದೆ. ಶಂಕಿತ ಉಗ್ರ ಕಿಂಗ್ ಪಿನ್ ಯಾಸಿನ್ ನನ್ನ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಯಾಸಿನ್ ಜೊತೆ, ಮಂಗಳೂರು ನಿವಾಸಿ ಮಾಜ್ ಹಾಗೂ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರೀಕ್ ನನ್ನು ಪೊಲೀಸರು ಬಂಧಿಸಿ, 7 ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ.

ಇನ್ನು ಈ ನಾಲ್ವರ ಪೈಕಿ, ಸದ್ಯ ಇಬ್ಬರ ಬಂಧನವಾಗಿದ್ದು, ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಫೈನಲ್ ಇಯರ್ ವಿದ್ಯಾರ್ಥಿ ಶಿವಮೊಗ್ಗದ ಸಿದ್ಧೇಶ್ವರ ನಗರ ನಿವಾಸಿ ಯಾಸಿನ್ ಬಾಂಬ್ ತಯಾರಿಕೆಯ ಟ್ರೈನಿಂಗ್ ಕೊಡ್ತಿದ್ದ ಬಗ್ಗೆ ಪೊಲೀಸರಿಗೆ ಸಾಕ್ಷಿ ಲಭ್ಯವಾಗಿದೆ. ಐಸಿಸ್ ಜೊತೆ ನೇರ ಸಂಪರ್ಕ ಹೊಂದಿರೋ ಯಾಸಿನ್ ಬಗ್ಗೆ ಮಾಹಿತಿ ಪ್ರೇಮ್ ಸಿಂಗ್ ಪ್ರಕರಣದಲ್ಲಿ ಪೊಲೀಸರಿಗೆ ಲಭ್ಯವಾಗಿದ್ದು, ಪ್ರೇಮ್ ಸಿಂಗ್ ಹಲ್ಲೆ ಆರೋಪಿ ಜಬೀವುಲ್ಲಾ ಫೋನ್ ಮೂಲಕ ದೊರೆತಿದೆ ಎನ್ನಲಾಗಿದ್ದು, 15 ದಿನಗಳ ಹಿಂದೆಯೇ ಇವರ ಸುಳಿವು ದೊರೆತು ಈ ಮೂವರನ್ನು ಬಂಧಿಸಲಾಗಿದೆ.

ಇದೀಗ ಈ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆ ಪೈಕಿ ಶಾರೀಕ್ ತಪ್ಪಿಸಿಕೊಂಡಿದ್ದಾನೆ. ಮಾಜ್​ ಹಾಗೂ ಯಾಸಿನ್ ನನ್ನು ಬಂಧಿಸಲಾಗಿದೆ. ಯಾಸಿನ್ ಬಹಳ ಒಳ್ಳೆಯ ಹುಡುಗ. ಇಂಜಿನಿಯರಿಂಗ್ ಕಲಿಯಲು ಹೋದನೋ ಆಗಲೇ ಬದಲಾವಣೆಯಾಗಿದ್ದಾನೆ ಎಂಬುದು ಯಾಸೀನ್ ಅಜ್ಜನ ಮಾತು.

ಒಟ್ಟಿನಲ್ಲಿ, ಐಸಿಸ್ ಉಗ್ರರ ಜೊತೆ ಶಿವಮೊಗ್ಗ ಮತ್ತು ಮಂಗಳೂರು ಲಿಂಕ್ ಜೋಡಣೆಯಾಗಿದ್ದು, ಬಂಧಿತ ಶಂಕಿತ ಉಗ್ರರಿಗೆ UAPA ಕೇಸ್ ದಾಖಲಿಸಿ, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಾಂಬ್ ತಯಾರಿಕೆ ಮಾಡುತ್ತಿದ್ದ ಸ್ಥಳವಾಗಿರುವ ಗುರುಪುರದ ಹೊಳೆ ಬದಿಯಲ್ಲೂ ಮತ್ತು ಆತನ ಮನೆಯಲ್ಲೂ ಸ್ಪಾಟ್ ಮಹಜರು ನಡೆಸಿದ್ದು, ಉಗ್ರರ ಚಟುವಟಿಕೆಗೆ ಮಲೆನಾಡಿಗರು ಬೆಚ್ಚಿ ಬಿದ್ದಿದ್ದಾರೆ.

Edited By :
PublicNext

PublicNext

20/09/2022 11:07 pm

Cinque Terre

38.38 K

Cinque Terre

38