ರಾಯಚೂರು: ಒಂದು ವರ್ಷದಿಂದ ವೇತನ ನೀಡದ ಹಿನ್ನಲೆ ನೌಕರರು ಪ್ರತಿಭಟನೆಗಿಳಿದಿದ್ದಾರೆ. ಇತ್ತ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಊಟ, ಉಪಹಾರವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ..!
ಹೌದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಹಾಗೂ ವಸತಿ ಶಾಲೆಗಳಿರುವ ವಸತಿ ನಿಲಯಗಳ ಅಡುಗೆಮನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಕಳೆದ ಒಂದು ವರ್ಷದಿಂದ ಈ ಸಿಬ್ಬಂದಿಗೆ ವೇತನ ಜಮಾಗೊಳಿಸಿಲ್ಲ. ಹೀಗಾಗಿ ದೈನಂದಿನ ಬದುಕಿನ ಸಂಕಷ್ಟ ತಾಳಲಾರದೆ ಸಿಬ್ಬಂದಿಯು ಕಳೆದ ನಾಲ್ಕು ತಿಂಗಳುಗಳಿಂದ ಮೇಲಿಂದ ಮೇಲೆ ಆಯಾ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಾ ಬರುತ್ತಿದ್ದಾರೆ.
ಇದು ಪರೋಕ್ಷವಾಗಿ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತಿದೆ. ಸಿಬ್ಬಂದಿಯು ಹೋರಾಟ ಮಾಡುವುದಕ್ಕೆ ಹೋದಾಗ, ವಸತಿ ನಿಲಯಗಳಲ್ಲಿ ಸಕಾಲಕ್ಕೆ ಊಟ, ಉಪಹಾರ ದೊರೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ, ಕಾಲೇಜುಗಳಿಗೆ ಹಾಜರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
PublicNext
25/09/2022 12:00 pm