ಬೆಂಗಳೂರು; ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿಗೆ ಸರ್ಕಾರದ ಮಾರ್ಗಸೂಚಿ ದರ ಪ್ರಕಾರ 27 ಕೋಟಿ ರು. ದರ ಪ್ರಕಾರ ಮಂಜೂರು ಮಾಡದೇ ಕೇವಲ 7.68 ಕೋಟಿ ರು. ಮಂಜೂರು ಮಾಡಿ ಆದೇಶ ಹೊರಡಿಸಿರುವ ಸರ್ಕಾರವು ಬೊಕ್ಕಸಕ್ಕೆ ಅಂದಾಜು 20 ಕೋಟಿ ನಷ್ಟವನ್ನು ಹೊರಿಸಿದೆ.
ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೆ ನಂಬರ್ 89ರಲ್ಲಿದ್ದ ಒಟ್ಟು 40.20 ಎಕರೆ ಪೈಕಿ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಜನಸೇವಾ ಟ್ರಸ್ಟ್‌ಗೆ ಸಚಿವ ಸಂಪುಟವು ಮಂಜೂರು ಮಾಡಿತ್ತು. ಆದರೆ ಇದರಲ್ಲಿ 10 ಎಕರೆಯನ್ನು ಕಡಿತಗೊಳಿಸಿ 25 ಎಕರೆ ಮಂಜೂರು ಮಾಡಿ 2022ರ ಸೆ.13ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕುರುಬರಹಳ್ಳಿಯಲ್ಲಿ ಪ್ರತಿ ಎಕರೆಗೆ ಮಾರುಕಟ್ಟೆ ಬೆಲೆಯು 2 ಕೋಟಿ ರು. ಇದೆ. ಇದರ ಪ್ರಕಾರ 25 ಎಕರೆಗೆ 50 ಕೋಟಿ ರು. ಬೆಲೆ ಇದೆ. ಸರ್ಕಾರವು ಆದೇಶದಲ್ಲಿ ನಮೂದಿಸಿರುವ ಮಾರ್ಗಸೂಚಿ ದರದ ಪ್ರಕಾರ ಪ್ರತಿ ಎಕರೆಗೆ 1.20 ಕೋಟಿ ರು. ಇದೆ. ಆದರೆ ಜನಸೇವಾ ಟ್ರಸ್ಟ್‌ಗೆ ಮಾರ್ಗಸೂಚಿ ಮೌಲ್ಯದ ಶೇ.25ರಷ್ಟು ದರದಲ್ಲಿ ಮಂಜೂರು ಮಾಡುವ ಮೂಲಕ ಬೊಕ್ಕಸಕ್ಕೆ 20 ಕೋಟಿ ನಷ್ಟಕ್ಕೆ ದಾರಿಮಾಡಿಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಮಾರ್ಗಸೂಚಿ ದರದ ಪ್ರಕಾರ ಎಕರೆಗೆ 1.20 ಕೋಟಿ ಯಂತೆ 25 ಎಕರೆಗೆ 27 ಕೋಟಿ ರು ಆಗಲಿದೆ. ಆದರೀಗ ಈ ಮಾರ್ಗಸೂಚಿ ಮೌಲ್ಯದ ಶೇ.25ರಷ್ಟು ದರದ ಪ್ರಕಾರ 25 ಎಕರೆಗೆ ಕೇವಲ 7.68 ಕೋಟಿ ರು. ದರದಲ್ಲಿ ಮಂಜೂರು ಮಾಡಿದೆ. ಮಾರ್ಗಸೂಚಿ ದರದಲ್ಲಿ ಎಕರೆಗೆ 31.25 ಲಕ್ಷ ರು. ಇದ್ದರೆ ಮಾರ್ಗಸೂಚಿ ಬೆಲೆ ಶೇ.25ರ ದರದಂತೆ ಎಕರೆಗೆ 7.68 ಲಕ್ಷ ರು. ಆಗಲಿದೆ. ಎಕರೆಗೆ 23.57 ಲಕ್ಷ ರು. ನಷ್ಟವಾದಂತಿದೆ. ಒಟ್ಟಾರೆ 25 ಎಕರೆಗೆ ಶೇ.25ರ ದರದಲ್ಲಿ ಮಂಜೂರು ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 20 ಕೋಟಿ ರು. ನಷ್ಟದ ಹೊರೆಯನ್ನು ಹೊರಿಸಿದಂತಾಗಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ವೆ ನಂ 89ರಲ್ಲಿ ಲಭ್ಯವಿರುವ ಜಮೀನನ್ನು ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ ಬಲರಾಮ್ ಅವರು ‘ ಈ ಭೂಮಿಯು ಅತಿ ಅಮೂಲ್ಯವಾದ ಭೂಮಿಯಾಗಿರುವುದರಿಂದ ಈ ಸಂಸ್ಥೆಗೆ ನೀಡುವುದು ಸರಿಯಲ್ಲ. ಆದ್ದರಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ತಿಳಿಸಲು ನಿರ್ದೇಶಿತನಾಗಿದ್ದೇನೆ,’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.
ಅಲ್ಲದೆ ಅಮೂಲ್ಯವಾದ ಜಮೀನನ್ನು ಮಂಜೂರು ಮಾಡುವ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಜೆ ಮಂಜುನಾಥ್ ಅವರು ಪ್ರಾದೇಶಿಕ ಆಯುಕ್ತರ ಮೂಲಕ ಪ್ರಸ್ತಾವನೆ ಸಲ್ಲಿಸಿರಲಿಲ್ಲ. ಬದಲಿಗೆ ನೇರವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಆಶ್ರಯ ಯೋಜನೆ ಮತ್ತು ಶಾಶ್ವತ ಪುನರ್ ವಸತಿ ಉದ್ದೇಶವೂ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗೆಂದು ಮೀಸಲಿರಿಸಿರುವ 40 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನು ಹಂಚಿಕೆ ಸಂಬಂಧದ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಿ ಬಲರಾಮ್ ಅವರು ತಿರಸ್ಕರಿಸಿದ್ದರು. ಈ ಸಂಬಂಧ 2022ರ ಮೇ 4ರಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆದಿದ್ದರು.
ಜನಸೇವಾ ಟ್ರಸ್ಟ್‌ಗೆ ಕುರುಬರಹಳ್ಳಿಯಲ್ಲಿರುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಲು ಹೋಬಳಿಯ ಮೂರು ಗ್ರಾಮಗಳ ಗ್ರಾಮಸ್ಥರು ವಿರೋಧಿಸಿ ತಕರಾರು ಎತ್ತಿದ್ದರು. ಅಲ್ಲದೆ ಸುಮಾರು ಒಂದು ಸಾವಿರ ಜಾನುವಾರುಗಳನ್ನು ಮೇಯಿಸಲು ಈ ಜಮೀನು ಅತ್ಯವಶ್ಯಕವಾಗಿತ್ತು. ಹೀಗಾಗಿ ಯಾವುದೇ ಖಾಸಗಿ ಸಂಘ, ಸಂಸ್ಥೆ, ಟ್ರಸ್ಟ್‌ಗಳಿಗೆ ಜಮೀನು ಮಂಜೂರು ಮಾಡಬಾರದು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು.
ಜನಸೇವಾ ಟ್ರಸ್ಟ್ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಮುನ್ನವೇ ಇದೇ ಗೋಮಾಳದಲ್ಲಿ ಜಮೀನು ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದ ಖಾಸಗಿ ಸಂಘವೊಂದರಿಂದ ಕಂದಾಯ ಇಲಾಖೆಯ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸಿದ್ದರು. ಇದು ರಾಜ್ಯದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರ ಗಮನದಲ್ಲೂ ಇತ್ತು.
ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿರುವ ಗೋಮಾಳ ಜಮೀನಿನಲ್ಲಿ ಗೋ ಶಾಲೆ ತೆರೆಯಲು ಹಲವು ಸಂಘ ಸಂಸ್ಥೆಗಳು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ತಿರಸ್ಕರಿಸಿದ್ದ ಸ್ಥಳೀಯ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಸಂಘ ಪರಿವಾರ ಹಿನ್ನೆಲೆಯ ಜನಸೇವಾ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದರು.
ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್ 89ರಲ್ಲಿನ ಒಟ್ಟು ಗೋಮಾಳ ಜಮೀನಿನಲ್ಲಿ 24 ಎಕರೆ ಮಂಜೂರಿಗೆ ಅರ್ಜಿ ಸಲ್ಲಿಸಿದ್ದ ಜನಸೇವಾ ಟ್ರಸ್ಟ್‌ನ ನಿರ್ಮಲ್ ಕುಮಾರ್ ಅವರು ಇದೇ ಟ್ರಸ್ಟ್‌ನ ಮತ್ತೊಂದು ಅಂಗ ಸಂಸ್ಥೆಯಾಗಿರುವ ಜನಸೇವಾ ವಿಶ್ವಸ್ಥ ಮಂಡಳಿಯ ಪರವಾಗಿಯೂ 35.33 ಎಕರೆ ಜಮೀನು ಮಂಜೂರಾತಿಗಾಗಿ ಮರು ಮನವಿ ಸಲ್ಲಿಸಿದ್ದರು.
ಜನಸೇವಾ ಟ್ರಸ್ಟ್ ಈಗಾಗಲೇ ಚನ್ನೇನಹಳ್ಳಿಯಲ್ಲಿ ಅಂದಾಜು 80 ಕೋಟಿ ರು. ಬೆಲೆ ಬಾಳುವ 40.07 ಎಕರೆ ಜಮೀನು ಹೊಂದಿದ್ದರೂ ಚನ್ನೇನಹಳ್ಳಿಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿಯೂ 25 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಇದೇ ಟ್ರಸ್ಟ್‌ಗೆ ರಾಜ್ಯ ಬಿಜೆಪಿ ಸರ್ಕಾರವು ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕೃಪೆ: ದಿ ಫೈಲ್
PublicNext
16/09/2022 10:47 am