ತುಮಕೂರು: ತುಮಕೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಯೊಂದು ಸದ್ದು ಮಾಡುತ್ತಿದೆ... ಆಡಳಿತದಲ್ಲಿ 40 ಪರ್ಸೆಂಟ್ ವಿಚಾರವಾಗಿ ಮಾತನಾಡಿದ ಅವರು, "ಸ್ವಾತಂತ್ರ್ಯ ಬಂದ ನಂತರ ಹಾಗೂ ಸ್ವಾತಂತ್ರ ಪೂರ್ವ ದಲ್ಲೂ ಇದು ಇತ್ತು" ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಉಡುಗೊರೆ ಕೊಡೋದನ್ನು ಇಟ್ಟುಕೊಂಡಿದ್ದರು. ಸ್ವಾತಂತ್ರ್ಯ ಬಂದ ಬಳಿಕ ಸಣ್ಣಪುಟ್ಟ ಮಟ್ಟದಲ್ಲಿ ಸರ್ಕಾರದ ವ್ಯವಹಾರ ನಡೆಯುತ್ತಿತ್ತು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸ್ವೇಚ್ಛಾಚಾರದಂತೆ ನಡೆದಿದೆ.ಇದನ್ನು ನಿಲ್ಲಿಸುವುದು ಹೇಗಂತ ಚರ್ಚೆ ಮಾಡಬೇಕು ಎಂದರು.
ನಾನು ರಾಜ್ಯದ ಮುಖ್ಯಮಂತ್ರಿ ಯಾಗಿದ್ದಾಗ ಪರ್ಸಂಟೇಜ್ ನಿಲ್ಲಿಸಬೇಕೆಂದು ವೈಯಕ್ತಿಕವಾಗಿ ತೀರ್ಮಾನಿಸಿದೆ. ಆದರೂ ಸಾಧ್ಯವಾಗಲಿಲ್ಲ. ಇದೆಲ್ಲ ಸರಿಪಡಿಸಲು, ಕಠಿಣ ನಿರ್ಧಾರ ತಳೆಯಬೇಕಾದರೆ ಒಂದು ಸ್ವತಂತ್ರ ಸರ್ಕಾರ ಅಧಿಕಾರಕ್ಕೆ ಬರಬೇಕು.ನನ್ನ ಕಾಲದಲ್ಲೂ ಪರ್ಸಂಟೇಜ್ ನಡೆದುಕೊಂಡು ಬಂದಿದೆ. ಆ ಒಂದು ವಿಷಯದಲ್ಲಿ ನಾವು ದೂರ. ನಾವು ಸರ್ಕಾರದಲ್ಲಿ ಅಧಿಕಾರ ನಡೆಸಬೇಕಾದರೆ, ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ ಎಂದರು.
ನಾವು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿದ್ವಿ. ರೈತರ ಸಾಲ ಮನ್ನಾ ಮಾಡಿದೆ. ಅದರಲ್ಲಿ ಕಮಿಷನ್ ತೆಗೆದುಕೊಳ್ಳಲು ಆಗುತ್ತಾ!? ರೈತರಿಂದ ಪ್ರೀತಿ ಗಳಿಸಬಹುದು, ಅದೇ ನನಗೆ ಕಮಿಷನ್. ಮೈತ್ರಿ ಸರ್ಕಾರದ ವೇಳೆ ಕೆಲ ಇಲಾಖೆಯಲ್ಲಿ ಕಮಿಷನ್ ನಡೆದಿದೆ. ಜೆಡಿಎಸ್ ಮಂತ್ರಿಗಳಿಗೆ ಕಮಿಷನ್ ಇಟ್ಟುಕೊಳ್ಳಿ ಅಂತ ನಾನು ಸೂಚನೆ ಕೊಟ್ಟಿರಲಿಲ್ಲ. ಯಾರಿಗೂ ಆ ಕೆಲಸ ಮಾಡಲು ಬಿಟ್ಟಿಲ್ಲ ಎಂದು ಹೆಚ್ ಡಿಕೆ ತಿಳಿಸಿದರು.
ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್ ತುಮಕೂರು
PublicNext
26/08/2022 10:47 pm