ವರದಿ : ರವಿ ಕುಮಾರ್, ಕೋಲಾರ
ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಪ್ರತಿಭಟನೆಗಳು ನಿತ್ಯ ನಡೆಯುತ್ತಿರುತ್ತವೆ. ಆ.26ರಂದು ಪ್ರತಿಭಟನೆಗೆ ಕರೆ ನೀಡಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಕಡೆಯವರೇ ಉದ್ದೇಶಪೂರ್ವಕವಾಗಿ ಕೋಳಿ ಮೊಟ್ಟೆ ಎಸೆದಿರಬಹುದು, ಯಾರಿಗೆ ಗೊತ್ತು? ಎಂದು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಕಿಡಿಕಾರಿದ್ದಾರೆ.
ಇನ್ನು, ಪ್ರತಿಭಟನೆ ನಡೆಸಲೆಂದೇ ವಿವಾದ ಸೃಷ್ಟಿಸಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡಲು ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿ, ಯಾವುದೇ ವಿಷಯ ಸಿಕ್ಕಿದರೂ ಪ್ರತಿಭಟನೆ ನಡೆಸುತ್ತಾರೆ. ಈಗ ಮೊಟ್ಟೆ ಸಿಕ್ಕಿದೆ ಎಂದರು. ಪೊಲೀಸ್ ವೈಫಲ್ಯ ಎನ್ನಲಾಗದು, ಹತ್ತು ಜನರು ನಿಂತಿರುವಾಗ ಯಾರೋ ಒಬ್ಬ ಸಂದಿಯಿಂದ ಕಲ್ಲು, ಮೊಟ್ಟೆ ಎಸೆಯುವುದು ನಡೆಯುತ್ತಿರುತ್ತದೆ ಎಂದರು.
ಮನಸ್ಸು ಮಾಡಿದರೆ ತಾನೂ ಬಿಜೆಪಿಯವರು ಓಡಾಡದಂತೆ ಮಾಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳುವುದು ಸರಿಯಲ್ಲ. ಅದು ಹೆದರಿಸುವ ತಂತ್ರವಾಗುತ್ತದೆ. ಅವರು ತಮ್ಮ ಪ್ರವಾಸದ ವೇಳಾಪಟ್ಟಿ ಕಳುಹಿಸಿಕೊಟ್ಟರೆ ಭದ್ರತೆಗೆ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು. ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, 2023ಕ್ಕೆ ಬಿಜೆಪಿ ಸರ್ಕಾರವೇ ಬರಲಿದೆ ಎಂದರು.
PublicNext
19/08/2022 10:54 pm