ಮುಧೋಳ : ಬೇರೆ ಬೇರೆ ಹೆಸರಿನ ಮೇಲೆ, ಧರ್ಮದ ಮೇಲೆ, ಜಾತಿ, ದೇವರ ಹೆಸರಿನ ಮೇಲೆ ಬಿಜೆಪಿಯವರು ಅಜೆಂಡಾ ಮಾಡುತ್ತಾರೆ. ನೀವು ಬಿಜೆಪಿಯವರನ್ನ ನೋಡಿ ಕಲಿಯಿರಿ ಹಾಗೆ ಆದಾಗ ಮಾತ್ರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಬುದ್ಧಿವಾದ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಶನಿವಾರ ನಡೆದ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದಂಗವಾಗಿ ಮುಧೋಳ ಮತ್ತು ಲೋಕಾಪೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಬೆಳಗಲಿ ಗ್ರಾಮದಿಂದ ಮುಧೋಳದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯ ಸಮಾರೋಪದಲ್ಲಿ ಅವರು ಮಾತನಾಡಿದರು.
ಚುನಾವಣೆ ಬಂದಾಗ ಮಾತ್ರ ಕ್ರಿಯಾಶೀಲರಾಗದೆ, ಕಾಂಗ್ರೆಸ್ ಪಕ್ಷ ಕಟ್ಟಿಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದನ್ನು ಬಿಜೆಪಿಯವರನ್ನು ನೋಡಿ ಕಲಿಯಿರಿ ಎಂದು ಕಿವಿಮಾತು ಹೇಳಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಇಬ್ಬರ ಶ್ರಮ ಬಹಳ ಮುಖ್ಯವಿದೆ. ಇಲ್ಲದಿದ್ದರೆ ಬಹಳ ತೊಂದರೆ ಇದೆ ಎಂದರು.
ಆರ್.ಬಿ.ತಿಮ್ಮಾಪೂರ ಮತ್ತು ಸತೀಶ ಬಂಡಿವಡ್ಡರ ನೀವಿಬ್ಬರೂ ಮಹಾನ್ ನಾಯಕರ ಇಲ್ಲೇ ಇದ್ದೀರಿ. ನಾನು ಹೇಳಿದ್ದನ್ನು ತಾವು ಅರ್ಥೈಸಿಕೊಳ್ಳಬೇಕು, ನೀವಿಬ್ಬರೂ ಒಗ್ಗಟ್ಟಿನಿಂದ ಕೈಹಿಡಿದು ಓಡಬೇಕು. ಕೈ ಬಿಟ್ಟರೆ ಕೆಲಸವಾಗುವುದಿಲ್ಲ. ನೀವಿಬ್ಬರೂ ಓಡದೇ ಹೋದರೆ ಸಚಿವ ಗೋವಿಂದ ಕಾರಜೋಳ ಅವರು ರಿವರ್ಸ್ ಓಡಿ ಗೆಲ್ತಾರೆ.
ನಿಮ್ಮಿಬ್ಬರಲ್ಲಿ ಶಕ್ತಿ ಇದೆ. ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಡಬೇಕು. ಇಲ್ಲವಾದರೆ ಮತ್ತೆ ಸೋಲೋದು, ಹೋಗೋದು ಆಗುತ್ತದೆ. ಈಗ ಗೆಲ್ಲುವಂತಹ ಅವಕಾಶ ಇದೆ. ಎಲ್ಲರೂ ಒಗ್ಗಟ್ಟಿನಿಂದ ಗೆಲ್ಲಬೇಕೆಂದು ಎಂದು ಹೇಳಿದರು.ಹಾಗೆಯೇ ಟಿಕೆಟ್ ಗಾಗಿ ಕಿತ್ತಾಟ ನಡೆಸಬೇಡಿ ಎಂದರು.
PublicNext
14/08/2022 01:40 pm