ಅಥಣಿ : ಇಡೀ ಮಾನವ ಕುಲಕ್ಕೆ, ಸಮಾಜಕ್ಕೆ ಮಾದರಿಯಾದ ಮಹಾಪುರುಷರ ಜಯಂತಿಗಳು ಒಂದೇ ಜಾತಿಗೆ ಮಾತ್ರ ಸೀಮಿತವಾಗದೆ ಎಲ್ಲ ಸಮಾಜದವರು ಸೇರಿ ಮಾಡುವುದು ನಮ್ಮೆಲ್ಲರ ಹೊಣೆ ಮತ್ತು ಕರ್ತವ್ಯವಾಗಿದೆ. ತುಳಿತಕ್ಕೆ ಒಳಗಾದ ಹಡಪದ ಸಮಾಜವನ್ನು ಸರ್ಕಾರ ಗುರುತಿಸದೇ ಇರುವುದು ವಿಷಾದನೀಯ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಹೇಳಿದರು.
ಅವರು ಅಥಣಿಯ ಗಚ್ಚಿನಮಠದ ಆವರಣದಲ್ಲಿ ಜರುಗಿದ ನಿಜಸುಖಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 888ನೇ ಜಯಂತ್ಯೋತ್ಸವ ಹಾಗೂ ಅಥಣಿ ತಾಲೂಕಾ ಬೃಹತ್ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ್ರು. ಹಡಪದ ಸಮಾಜಕ್ಕೆ ಬೇಕಾದ ಸವಲತ್ತುಗಳನ್ನು ಕೊಡಿಸಲು ನಾನು ಖುದ್ದಾಗಿ ಮುಖ್ಯಮಂತ್ರಿಗಳ ಬಳಿ ತಮ್ಮನ್ನು ಕರೆದುಕೊಂಡು ಹೋಗುವೆನು. ಶರಣರ ಮಾತಿನಂತೆ ಸಣ್ಣ ಸಣ್ಣ ಸಮಾಜಗಳು ಜಾಗೃತವಾದರೆ ಸಾಮಾಜಿಕ ಸಮಾನತೆಯನ್ನು ಕಾಣಬಹುದು ಎಂದರು.
ಅನಂತರ ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಮಾತನಾಡಿ ಕಲ್ಯಾಣ ಕ್ರಾಂತಿಯ ವೇಳೆ ಅಣ್ಣ ಬಸವಣ್ಣನವರ ಹೆಗಲಿಗೆ ಹೆಗಲುಕೊಟ್ಟ ಹಡಪದ ಅಪ್ಪಣ್ಣನವರ ಆದರ್ಶಗಳನ್ನು ಇಂದಿನ ಯುವ ಜನಾಂಗ ರೂಢಿಸಿಕೊಳ್ಳಬೇಕಿದೆ. ವೃತ್ತಿಯೇ ಕೈಲಾಸವೆಂದು ಪ್ರಾಮಾಣಿಕವಾಗಿ ವೃತ್ತಿಯಲ್ಲಿ ತೊಡಗೋಣ ಎಂದರು.
ನಂತರ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಗುರುಪಾದ ಸ್ವಾಮಿಗಳು, ಶ್ರೀ ಗುರುಸಿದ್ದೇಶ್ವರ ಸ್ವಾಮಿಗಳು ಶೆಟ್ಟರಮಠದ ಮರುಳಸಿದ್ದ ಮಹಾಸ್ವಾಮೀಜಿ ಅವರುಗಳು ಆಶೀರ್ವಚನ ನೀಡಿದರು. ಸಂತೋಷ ಹಡಪದ ಅವರು ಪ್ರಾಸ್ತಾವಿಕ ನುಡಿ, ಭೀಮಾ ಶಂಕರ ಶರಣರು ಶರಣ ಚಿಂತನೆ ಹೇಳಿದರು. ಈ ವೇಳೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಹುನ್ನೂರ, ಬಸವರಾಜ ಹಡಪದ, ಸುರೇಶ ಹಡಪದ, ಮಹಾತೇಶ ಹಡಪದ, ಚನ್ನು ನಾವಿ ಸೇರಿದಂತೆ ಅನೇಕರಿದ್ದರು.
PublicNext
13/08/2022 09:52 pm