ವರದಿ- ಸಂತೋಷ ಬಡಕಂಬಿ
ಕಾಗವಾಡ: ಕಾಗವಾಡ ಮತ ಕ್ಷೇತ್ರದ ಜಂಬಗಿ ಗ್ರಾಮದಲ್ಲಿ ತಾಲ್ಲೂಕಾಡಳಿತದೊಂದಿಗೆ ಶಾಸಕ ಶ್ರೀಮಂತ ಪಾಟೀಲ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ನಡೆಸಿದ ಸಭೆಗೆ ಗೈರಾಗಿದ್ದ ಅಥಣಿ ಹೆಸ್ಕಾಂ ಎಇಇ ಅವರ ವಿರುದ್ಧ ಗರಂ ಆದ ಘಟನೆ ಜರುಗಿದೆ.
ರೈತರಿಗೆ 2019ರಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಮಂಜೂರಾದ ಟಿಸಿ ಮತ್ತು ಬೊರವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಇಲ್ಲಿಯವರೆಗೂ ನೀಡಿಲ್ಲ ಎಂದು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದರು. ಆದರೆ ಸಾರ್ವಜನಿಕ ಕುಂದುಕೊರತೆ ಸಭೆಗೆ ಗೈರು ಹಾಜರಿದ್ದ ಅಥಣಿ ಹೆಸ್ಕಾಂ ಎಇಇ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಭೆಯ ಬಗ್ಗೆ ಮಾಹಿತಿ ಇದ್ದರೂ ಸಭೆಗೆ ಯಾಕೆ ಬರಲಿಲ್ಲ ಎಂದು ಶಾಸಕರು ಪ್ರಶ್ನಿಸಿದರು. 'ನಿಮ್ಮ ಇಲಾಖೆಯಲ್ಲಿ ಸಾರ್ವಜನಿಕರ ಸಾಕಷ್ಟು ಸಮಸ್ಯೆಗಳ ದೂರುಗಳಿದ್ದು, ಇದನ್ನ ಯಾರ ಮುಂದೆ ಹೇಳಬೇಕು? ಇದರ ಬಗ್ಗೆ ಸಂಜೆಯೊಳಗೆ ಸಂಪೂರ್ಣ ನನಗೆ ಮಾಹಿತಿ ನೀಡಬೇಕು' ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ತಹಶೀಲ್ದಾರ್ ಸುರೇಶ ಮುಂಜೆ, ಸಿಡಿಪಿಒ ಸಂಜಯಕುಮಾರ ಸದಲಗೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪ್ರವೀಣ ಪಾಟೀಲ್, ಪಿಎಸ್ಐ ಕುಮಾರ ಹಾಡಕಾರ, ವೆಂಕಟೇಶ ಕುಲಕರ್ಣಿ, ಶಾಂತಾ ಪೂಜಾರಿ, ವಿನಾಯಕ ಬಾಗಡಿ, ವಿನಾಯಕ ಪಾಟೀಲ್, ಆರ್ ಎಮ್ ಪಾಟೀಲ ಸೇರಿದಂತೆ ಅನೇಕ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
PublicNext
23/07/2022 06:34 pm