ವರದಿ- ಈರನಗೌಡ ಪಾಟೀಲ
ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹಾವೇರಿ ಜಿಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದರು. ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಶಿಗ್ಗಾಂವ್ ತಾಲೂಕಿನ ಖುರ್ಷಾಪುರ ಗ್ರಾಮದಲ್ಲಿ ಜವಳಿ ಪಾರ್ಕ್ ಹಾಗೂ ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
"ಕೃಷಿ ನೀತಿಯಲ್ಲಿ ಬದಲಾವಣೆ ಮಾಡಿ ಕೃಷಿ ಉದ್ಯಮ ನೀತಿ ಮಾಡಬೇಕಿದೆ. ರೈತ ಉಳಿದರೆ ಕೃಷಿ, ದೇಶ ಉಳಿಯುತ್ತದೆ. ರೈತರ ಕುಟುಂಬದ ಆದಾಯ ಹೆಚ್ಚಾಗಬೇಕು. ಉದ್ಯೋಗ ಅರಸಿಕೊಂಡು ದೊಡ್ಡ ದೊಡ್ಡ ನಗರಗಳಿಗೆ ಹೋಗುತ್ತಾರೆ.
ಯಾರು ಅತಿ ಹೆಚ್ಚು ಉದ್ಯೋಗ ಕೊಡುತ್ತಾರೋ ಅವರಿಗೆ ಹೆಚ್ಚಿನ ಇನ್ಸೆಂಟೀವ್ ಕೊಡಬೇಕು ಅಂತಾ ತೀರ್ಮಾನ ಮಾಡಿದ್ದೇವೆ. ಉತ್ತರ ಕರ್ನಾಟಕದ ಎಲ್ಲ ತಾಲೂಕುಗಳಲ್ಲಿ ಜವಳಿ ಪಾರ್ಕ್ ಗಳು ಬರಬೇಕು" ಎಂದರು.
"ಬರುವ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿಯೂ ಟೆಕ್ಸ್ ಟೈಲ್ ಪಾರ್ಕ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಜವಳಿ ಪಾರ್ಕಿನಿಂದ ಸುತ್ತಮುತ್ತಲಿನ ಗ್ರಾಮಗಳ ಹತ್ತು ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಇನ್ನೊಂದು ವರ್ಷದ ಒಳಗಾಗಿ ಶಿಗ್ಗಾಂವಿಯಲ್ಲಿ ಹತ್ತು ಸಾವಿರ ಜನರಿಗೆ ಉದ್ಯೋಗ ಕೊಡುವ ಸಂಕಲ್ಪ ಮಾಡಿದ್ದೇನೆ" ಎಂದರು.
"ಶಿಗ್ಗಾಂವಿ ತಾಲೂಕಿನ ಜನರ ಋಣ ತೀರಿಸಲು ಸಾಧ್ಯವಿಲ್ಲ. ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನೀವು ಮಾಡಿದ ಹಾರೈಕೆ, ಆಶೀರ್ವಾದದಿಂದ ಈ ಸ್ಥಾನಕ್ಕೆ ಬಂದು ಕುಳಿತಿದ್ದೇನೆ. ನಾನು ಬೆಂಗಳೂರಿನಲ್ಲಿದ್ರೂ ಸದಾ ಕಾಲ ಶಿಗ್ಗಾಂವಿ ಬಗ್ಗೆ ವಿಚಾರ ಮಾಡ್ತಿರ್ತೇನೆ ಎಂದರು.
PublicNext
16/07/2022 06:23 pm