ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಎಡವಿ ಬಿದ್ದು ಭುಜದ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಸದ್ಯ ತೀವ್ರ ನಿಘಾ ಘಟಕದಲ್ಲಿ ಲಾಲೂ ಪ್ರಸಾದ್ ಯಾದವ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಲಾಲೂ ಪುತ್ರ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಲಾಲೂ ಪ್ರಸಾದ್ ಯಾದವ್ ಅವರ ಆರೋಗ್ಯ ವಿಚಾರಿಸಿದ್ದು, ಶೀಘ್ರ ಚೇತರಿಕೆಗೆ ಪಾರ್ಥಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಜೆಡಿ ವಕ್ತಾರ ಚಿತ್ತರಂಜನ್ ಗಗನ್, ‘ಪ್ರಧಾನಿ ಮೋದಿ ಅವರು ಮಂಗಳವಾರ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ಕರೆ ಮಾಡಿ ಮಾತನಾಡಿ ಆರ್‌ಜೆಡಿ ಮುಖ್ಯಸ್ಥರ ಆರೋಗ್ಯವನ್ನು ವಿಚಾರಿಸಿದ್ದಾರೆ. ಮತ್ತು ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ' ಎಂದು ತಿಳಿಸಿದ್ದಾರೆ.
ಭಾನುವಾರ ಮನೆಯಲ್ಲಿ ಬಿದ್ದು ಭುಜದ ಮೂಳೆ ಮುರಿದುಕೊಂಡಿದ್ದ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್‌ಗೆ ಅನಾರೋಗ್ಯ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿದೆ.
ಅವಶ್ಯಕತೆ ಬಿದ್ದರೆ ಲಾಲೂ ಪ್ರಸಾದ್ ಯಾದವ್‌ರನ್ನು ದೆಹಲಿಗೆ ಏರ್‌ಲಿಫ್ಟ್ ಮಾಡಲಾಗುವುದು. ಬಿಹಾರ ಸರ್ಕಾರ ಲಾಲೂ ಆರೋಗ್ಯ ಕುರಿತು ನಿಗಾವಹಿಸಿದೆ. ಎಲ್ಲಾ ರೀತಿ ನೆರವು ನೀಡಲಿದೆ ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.
PublicNext
06/07/2022 10:13 am