ಗದಗ: ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ದಣಿವರಿಯದೇ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಗುರುವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಹುಬ್ಬಳ್ಳಿಯ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದ ಅವರು, ಪ್ರಸಕ್ತ ವರ್ಷ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಶಿಕ್ಷಕರಲ್ಲಿ ಮನವಿ ಮಾಡಿದರು.
ಲಕ್ಷ್ಮೇಶ್ವರದ ಮಹಿಳಾ ಪದವಿ ಕಾಲೇಜು, ಸರ್ಕಾರಿ ಪ್ರೌಢಶಾಲೆ, ಬಿ.ಇಡಿ ಕಾಲೇಜು, ಎಕ್ಸಲಂಟ್ ಇಂಗ್ಲೀಷ್ ಮಾಧ್ಯಮ ಹೈಸ್ಕೂಲ್, ಜಗದ್ಗುರು ವೀರ ಗಂಗಾಧರ ಸರ್ಕಾರಿ ಪ್ರೌಢಶಾಲೆ, ಇಂಗ್ಲೀಷ್ ಮಾಧ್ಯಮ ಹೈಸ್ಕೂಲು, ದೂದಪೀರಾ ಸರ್ಕಾರಿ ಉರ್ದು ಪ್ರೌಢಶಾಲೆ, ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ, ಶ್ರೀ ಉಮಾ ವಿದ್ಯಾಲಯ ಪುರಸಭೆಯ ಪ್ರೌಢಶಾಲೆ, ಬಿ.ಡಿ.ಕಟ್ಟಿ ಅಂಧ ಮತ್ತು ವಿಕಲಚೇತನ ಶಾಲೆ, ಆಕ್ಸಫರ್ಡ್ ಶಾಲೆ, ಹುಬ್ಬಳ್ಳಿಯ ಕೆ.ಎಚ್.ಪಾಟೀಲ ಕಾಲೇಜು ಸೇರಿದಂತೆ ಅನೇಕ ಕಡೆಗಳಲ್ಲಿ ಗುರಿಕಾರ ಅವರು ಬಿರುಸಿನ ಪ್ರಚಾರ ನಡೆಸಿದರು.
ಪ್ರಸಕ್ತ ವರ್ಷ ಶಿಕ್ಷಕ ಮತದಾರರು ಬದಲಾವಣೆ ಬಯಸಿದ್ದಾರೆ. ಹೊಸ ಮುಖ ಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೋದ ಕಡೆಗಳಲ್ಲೆಲ್ಲ ಶಿಕ್ಷಕರು ಉತ್ತಮ ಬೆಂಬಲ ಸೂಚಿಸುತ್ತಿದ್ದು, ಈ ವರ್ಷ ಗೆಲುವು ಕಟ್ಟಿಟ್ಟ ಬುತ್ತಿ. ಗೆಲುವಿನ ಮೂಲಕ ಶಿಕ್ಷಕರ ಪ್ರತಿನಿಧಿಯಾಗಿ ನಾನು ಕೆಲಸ ಮಾಡಲಿದ್ದೇನೆ. ನಾಲ್ಕು ದಶಕಗಳಿಂದ ಶಿಕ್ಷಕರ ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿದ್ದು, ಆ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ ಎಂದು ಬಸವರಾಜ ಗುರಿಕಾರ ಭರವಸೆ ನೀಡಿದರು.
PublicNext
09/06/2022 08:48 pm