ದಾವಣಗೆರೆ: ಪ್ರಾಥಮಿಕ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮನೆ ಮೇಲೆ ದಾಳಿ ಯತ್ನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪಠ್ಯ ಪರಿಷ್ಕರಣೆ ವಿರೋಧಿಸಲು ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ಬಗ್ಗೆ ಆಕ್ಷೇಪಗಳಿದ್ದರೆ ಸರ್ಕಾರಕ್ಕೆ ಮನವಿ ಸಲ್ಲಿಸಲಿ. ಕಾನೂನು ರೀತಿ ಹೋರಾಟ ಮಾಡಲಿ. ಕಾನೂನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಸಚಿವರು ಏನೋ ಒಂದು ನಿರ್ಧಾರ ತೆಗೆದುಕೊಂಡಿರುತ್ತಾರೆ. ಅದು ತಪ್ಪು ಅನಿಸಿದರೆ ಕಾನೂನು ರೀತಿ ಹೋರಾಟ ಮಾಡಿ. ಅದನ್ನ ಬಿಟ್ಟು ಮನೆಗೆ ಬೆಂಕಿ ಹಚ್ಚುವುದು,ದಾಳಿ ಮಾಡುವುದು ಸರಿಯಲ್ಲ. ಇದನ್ನ ನಾನು ಖಂಡಿಸುತ್ತೇನೆ ಎಂದು ತಿಳಿಸಿದರು.
ಪಠ್ಯಕ್ರಮ ಪರಿಷ್ಕರಣೆ ವಿವಾದದ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಚಿವರ ವರದಿ ಕೇಳಿದ್ದಾರೆ. ಆಕ್ಷೇಪಣೆಗಳಿದ್ದರೆ ವಿಧಾನಸಭೆಯಲ್ಲಿ ಸಿಎಂ ಜೊತೆ ಚರ್ಚಿಸಿ. ಚರ್ಚೆಗೆ ಅವಕಾಶವಿದ್ದಾಗಲೂ ಟೀಕೆ ಮಾಡುವುದು ಸೂಕ್ತವಲ್ಲ. ಪ್ರಚಾರ, ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು.
PublicNext
03/06/2022 10:30 am