ಇಸ್ಲಾಮಾಬಾದ್: ತಮ್ಮ ಅಧಿಕಾರ ಕಳೆದುಕೊಳ್ಳುವ ದಿನಗಳು ಆರಂಭವಾದಾಗಿನಿಂದ ಭಾರತ ಮತ್ತು ಅದರ ವಿದೇಶಾಂಗ ನೀತಿಯನ್ನು ಕೊಂಡಾಡುತ್ತಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ತೈಲ ಬೆಲೆ ಇಳಿಕೆಯ ಬಳಿಕ ಅಮೆರಿಕದ ಒತ್ತಡಕ್ಕೆ ಮಣಿಯದ ಭಾರತದ ದಿಟ್ಟತನವನ್ನು ಮತ್ತೊಮ್ಮೆ ಶ್ಲಾಘಿಸಿದ್ದಾರೆ.
ಅಮೆರಿಕದ ಒತ್ತಡಕ್ಕೆ ಮಣಿಯದ ಭಾರತ, ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲವನ್ನು ಖರೀದಿಸುತ್ತಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ತಮ್ಮ ಸರ್ಕಾರ ಕೂಡ ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದಿಂದ ಇದೇ ನಿಟ್ಟಿನಲ್ಲಿ ಸಾಗುವತ್ತ ಕೆಲಸ ಮಾಡುತ್ತಿತ್ತು. ಆದರೆ ಈಗಿನ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ನೇತೃತ್ವದ ಸರ್ಕಾರ ಹಿಂದಡಿಯಿಡುತ್ತಿರುವ ಆರ್ಥಿಕತೆಯೊಂದಿಗೆ ಕಂಗಾಲಾಗಿ ಓಡಾಡುತ್ತಿದೆ ಎಂಟು ಟೀಕಿಸಿದ್ದಾರೆ.
ಭಾರತ ಸರ್ಕಾರವು ಶನಿವಾರ ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 9.5 ರೂ. ಮತ್ತು ಡೀಸೆಲ್ ದರವನ್ನು 7 ರೂ. ಇಳಿಕೆ ಮಾಡಿತ್ತು. ಈ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಇಮ್ರಾನ್ ಖಾನ್, ಭಾರತದ ನಡೆಯನ್ನು ಪ್ರಶಂಸಿಸಿದ್ದಾರೆ.
"ಕ್ವಾಡ್ ಗುಂಪಿನ ಭಾಗವಾಗಿದ್ದರೂ, ಭಾರತವು ಅಮೆರಿಕದ ಒತ್ತಡವನ್ನು ಸಮರ್ಥವಾಗಿ ಎದುರಿಸಿದೆ ಮತ್ತು ಜನರಿಗೆ ನೆಮ್ಮದಿ ನೀಡಲು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸಿದೆ. ಸ್ವತಂತ್ರ ವಿದೇಶಾಂಗ ನೀತಿಯ ಸಹಾಯದೊಂದಿಗೆ ಇದನ್ನು ಸಾಧಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತಿತ್ತು" ಎಂದು ಹೇಳಿದ್ದಾರೆ.
PublicNext
23/05/2022 07:36 am