ಬೆಂಗಳೂರು :ಕೈಗಾರಿಕೋದ್ಯಮದ ದೃಷ್ಟಿಯಿಂದ ಇಡೀ ಕರ್ನಾಟಕವು ಸೂಜಿಗಲ್ಲಿನಂತೆ ಹೂಡಿಕೆದಾರರನ್ನು ಸೆಳೆಯುವಂತಿರಬೇಕು.
ಇದಕ್ಕಾಗಿ ಸ್ವಿಫ್ಟ್ ಸಿಟಿ ತರಹದ ವಿನೂತನ ಪರಿಕಲ್ಪನೆಗಳು ಅತ್ಯಗತ್ಯ ಇದಕ್ಕಾಗಿ ಬೆಂಗಳೂರಿನ ಸರ್ಜಾಪುರದಲ್ಲಿ `ಸ್ವಿಫ್ಟ್ ಸಿಟಿ’ (SWIFT- Startup, Work-Spaces, Intelligence, Finance & Technology) ಎನ್ನುವ ವಿನೂತನ ಉಪಕ್ರಮದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಇದು ಎಲೆಕ್ಟ್ರಾನಿಕ್ ಸಿಟಿ, ಐಟಿಪಿಎಲ್ ನಂತರ ಸರ್ಕಾರವೇ ಸ್ಥಾಪಿಸುತ್ತಿರುವ ಯೋಜಿತ ನಗರವಾಗಲಿದೆ. ಹೆಸರೇ ಹೇಳುವಂತೆ ಇದು ನವೋದ್ಯಮಗಳು, ಕೆಲಸದ ಸ್ಥಳಗಳು, ಹಣಕಾಸು ಮತ್ತು ತಂತ್ರಜ್ಞಾನ ಈ ಐದೂ ಔದ್ಯಮಿಕ ಧಾರೆಗಳನ್ನು ಮುಖ್ಯವಾಗಿ ಪರಿಗಣಿಸಿದೆ.
ಇದನ್ನು ಸಾಧಿಸಲು ಸರ್ಜಾಪುರ ಕೈಗಾರಿಕಾ ಪ್ರದೇಶದಲ್ಲಿ 1,000 ಎಕರೆಗೂ ಹೆಚ್ಚು ಜಮೀನನ್ನು ಮೀಸಲಿಡಲಾಗುತ್ತೆ. ಬೆಂಗಳೂರಿನಲ್ಲಿ ಇಂದು ಸಾವಿರಾರು ಕಂಪನಿಗಳಿವೆ, ನಿಜ. ಆದರೆ ಇವುಗಳಿಗೆ ಯೋಜಿತ ಮತ್ತು ವ್ಯವಸ್ಥಿತ ತಾಣಗಳಿಲ್ಲ ಎನ್ನುವ ಅಸಮಾಧಾನ ಹಲವರಲ್ಲಿದೆ. ಆದ್ದರಿಂದ ಸರ್ಜಾಪುರದಲ್ಲಿ ಇಂತಹ ಹೆಜ್ಜೆ ಇಡಲಾಗುತ್ತದೆ.
ಇಲ್ಲಿ 150 ಮೀ. ಅಗಲದ ಸಂಪರ್ಕ ರಸ್ತೆ ಮಾಡಿ, ಅಲ್ಲಿ ವಿಶ್ವ ದರ್ಜೆಯ ಸೌಲಭ್ಯಗಳು, ವಸತಿ ವ್ಯವಸ್ಥೆ, ಶಾಲೆಗಳು ಇರುವಂತೆ ಅಭಿವೃದ್ಧಿ ಪಡಿಸಲಾಗುವುದು. ನೆರೆ ರಾಜ್ಯಗಳಿಂದ ನಮಗೆ ತೀವ್ರ ಸ್ಪರ್ಧೆ ಇದೆ. ಹೀಗಾಗಿ ಇಂತಹ ಉಪಕ್ರಮ ಅನಿವಾರ್ಯ' ಎನ್ನುವುದು ಅವರ ಮುಂದಾಲೋಚನೆ ಆಗಿದೆ. ಸರ್ಜಾಪುರ ಪ್ರದೇಶವು ರಾಜಧಾನಿಯಲ್ಲಿರುವ ಐಟಿ ತಾಣಗಳಿಗೆ ಹತ್ತಿರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 44 ಮತ್ತು 48ಕ್ಕೆ ಹತ್ತಿರಲ್ಲಿದೆ.
ಸಂಪರ್ಕ ಸೌಲಭ್ಯದ ದೃಷ್ಟಿಯಿಂದ ಇದು ವರದಾನವಾಗಿದ್ದು, ಈ ಭಾಗದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆಗೆ ಇಂಬು ನೀಡಲು ಸೂಕ್ತ ಸ್ಥಳವಾಗಿದೆ. ಇದನ್ನೆಲ್ಲ ಪರಿಗಣಿಸಿ, ಇದನ್ನು ಸ್ವಿಫ್ಟ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಇದು ಸ್ಟಾರ್ಟಪ್ ಹಬ್ ಆಗಲಿದ್ದು, ಇಲ್ಲಿ 8-10 ಅತ್ಯಾಧುನಿಕ ಪ್ಲಗ್ ಅಂಡ್ ಪ್ಲೇ ಸೌಲಭ್ಯಗಳು ಇರಲಿವೆ. ಇಂತಹ ಒಂದೊಂದು ಸ್ಥಾವರಕ್ಕೂ 20-25 ಎಕರೆ ಕೊಡಲಾಗುವುದು’ ಎಂದಿದ್ದಾರೆ.
ಈ ಪ್ಲಗ್ ಅಂಡ್ ಪ್ಲೇ ಪ್ರದೇಶದಲ್ಲಿ ಸುಸಜ್ಜಿತ ಕಚೇರಿಗಳು, ವಸತಿ ಪ್ರದೇಶಗಳು, ಕೋ-ವರ್ಕಿಂಗ್ ತಾಣಗಳು ಎಲ್ಲವೂ ಇರಲಿವೆ. ಈ ಮೂಲಕ ಉದ್ಯಮಗಳ ಒಂದು ವ್ಯವಸ್ಥಿತ ಜಾಲ ಏರ್ಪಡಲಿದ್ದು, ಅವು ಪರಸ್ಪರ ಸಹಭಾಗಿತ್ವ ಏರ್ಪಡಿಸಿಕೊಳ್ಳುವುದು ಸುಗಮವಾಗಲಿದೆ.
ಇದಲ್ಲದೆ, ಸ್ವಿಫ್ಟ್ ಸಿಟಿಯಲ್ಲಿ ನೆಲೆಯೂರಲಿರುವ ಸಣ್ಣ ಮತ್ತು ಮಧ್ಯಮ ಸ್ತರದ ಸ್ಟಾರ್ಟಪ್ ಉದ್ಯಮಗಳಿಗೆ ಕನಿಷ್ಠ 5,000 ಚದರ ಅಡಿಗಳಿಂದ ಹಿಡಿದು ಗರಿಷ್ಠ 20,000 ಚದರ ಅಡಿಗಳಷ್ಟು ಜಾಗವನ್ನು ಭೋಗ್ಯ, ಕ್ರಯ ಅಥವಾ ಬಂಡವಾಳ ಆಧರಿತ ಹಂಚಿಕೆ ಮಾದರಿಯಲ್ಲಿ ಒದಗಿಸಲಾಗುವುದು.
ಈ ಮೂಲಕ, ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಬಗೆಯ ಉದ್ಯಮಗಳ ಅಗತ್ಯಗಳನ್ನು ಪೂರೈಸುವುದು ಸಾಧ್ಯವಾಗಬೇಕೆನ್ನುವುದು ನಮ್ಮ ಚಿಂತನೆಯಾಗಿದೆ. ಮುಖ್ಯವಾಗಿ ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಅನಲಿಟಿಕ್ಸ್ ಮತ್ತು ಫಿನ್-ಟೆಕ್ ನಾವೀನ್ಯತಾ ಕೇಂದ್ರವಾಗಿಯೂ ಮುಂಚೂಣಿಗೆ ಬರಲಿದೆ ಎಂಬ ಅಭಿಪ್ರಾಯಪಟ್ಟಿದ್ದಾರೆ.
PublicNext
14/12/2024 03:23 pm