ಮೈಸೂರು: ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಪಿಎಸ್‌ಐ ನೇಮಕಾತಿಗಳು ನಡೆದಿದ್ದವು. ಇನ್ನೂ ಬೇರೆ ಬೇರೆ ನೇಮಕಾತಿಗಳು ನಡೆದಿದ್ದವು. ಆದ್ರೆ ಯಾವುದಾದ್ರೂ ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆದಿತ್ತಾ? ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಮೈಸೂರಿನ ಟಿ. ನರಸೀಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದಂತ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಸ್ಲಿಂಮರ ಮಟನ್ ಸ್ಟಾಲ್, ಕಸಾಯಿಖಾನೆ ಮುಚ್ಚಲು ನೋಟಿಸ್ ಕೊಟ್ಟಿರುವ ವಿಚಾರ. ಕೇವಲ ಮುಸ್ಲಿಮರನ್ನೇ ಯಾಕೆ ಟಾರ್ಗೆಟ್ ಮಾಡ್ತಿರಾ. ಒಂದು ಧರ್ಮ, ಒಂದು ಜಾತಿ ಟಾರ್ಗೆಟ್ ಮಾಡಬೇಡಿ. ಎಲ್ಲರ ಮೇಲೂ ಕಾನೂನು ಕ್ರಮ ಕೈಗೊಳ್ಳುವಂತಿದ್ದರೆ ಮಾಡಿ ಎಂದರು.
ಕಾನೂನು ಎಲ್ಲರಿಗೂ ಒಂದೇ. ರಾಜಕೀಯ ಲಾಭಕ್ಕಾಗಿ ಒಂದು ಧರ್ಮವನ್ನ ಟಾರ್ಗೆಟ್ ಮಾಡಬೇಡಿ. ಮುಸ್ಲಿಂ, ಕ್ರಿಶ್ಚಿಯನ್, ಹಿಂದೂ ಯಾರೆ ತಪ್ಪು ಮಾಡಿದ್ರು ಕ್ರಮ ತಗೊಳ್ಳಿ. ಒಂದು ವರ್ಗವನ್ನ ಟಾರ್ಗೆಟ್ ಮಾಡಿದರೆ ಮತ ಧೃವೀಕರಣ ಆಗತ್ತೆ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಅದು ಅಸಾಧ್ಯ. ಈಗಾಗಲೇ ಅವರಿಗೆ ತಿರುಗುಬಾಣ ಆಗಿದೆ ಎಂದರು.
ಹಿಂದಿ ರಾಷ್ಟ್ರ ಭಾಷೆ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಸಂವಿಧಾನ 15 ಭಾಷೆಗಳಿಗೆ ಅಧಿಕೃತ ಭಾಷೆ ಎಂಬ ಮಾನ್ಯತೆ ನೀಡಿದೆ. ಹಿಂದಿ ಕೂಡ ಒಂದು ಭಾಷೆ. ಹಿಂದಿ ರಾಷ್ಟ್ರ ಭಾಷೆ ಅಂತ ಎಲ್ಲಿಯೂ ಹೇಳಿಲ್ಲ. ಅಮಿತ್ ಷಾ ಅವರು ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬಳಸಬೇಕು ಅಂದಿರುವ ಕಾರಣಕ್ಕಾಗಿ ಬಿಜೆಪಿಯವರು ಓಲೈಕೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
PublicNext
30/04/2022 04:14 pm