ಲಖನೌ: ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಎಸ್‌ಪಿ ಬೆಂಬಲ ನೀಡಿರಲಿಲ್ಲ. ಇದರ ವಿರುದ್ಧ ಆಕ್ರೋಶಿತರಾಗಿದ್ದ ಕಾಂಗ್ರೆಸ್ ನಾಯಕ ರಾಹುರಲ್ ಗಾಂಧಿ, ಬಿಜೆಪಿಗೆ ಮುಕ್ತ ಅವಕಾಶ ನೀಡಲು ಬಿಎಸ್ ಪಿ ನಾಯಕಿ ಮಾಯಾವತಿ ನಮ್ಮ ಮೈತ್ರಿ ಪ್ರಸ್ತಾಪವನ್ನು ತಿರಸ್ಕರಿಸಿದ್ದರು ಎಂದು ಹೇಳಿಕೆ ನೀಡಿದ್ದರು.
ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಎಸ್‌ಪಿ ನಾಯಕಿ ಮಾಯಾವತಿ, 'ಅವರಿಗೆ ಸ್ವಂತ ಮನೆಯನ್ನೇ ಸರಿಯಾಗಿ ಕಟ್ಟಿಕೊಳ್ಳಲು ಆಗುತ್ತಿಲ್ಲ. ಬಿಎಸ್‌ಪಿಯನ್ನು ದೂಷಿಸುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ'. 'ಇಂತಹ ಸಣ್ಣ ವಿಷಯಗಳ ಬದಲಾಗಿ ಯುಪಿ ಚುನಾವಣೆಯ ಸೋಲಿನ ಬಗ್ಗೆ ಗಮನ ಹರಿಸಬೇಕು ಎಂದರು. ಕಾಂಗ್ರೆಸ್ ಇಂತಹ ಟೀಕೆಗಳನ್ನು ಮಾಡುವ ಮೊದಲು 100 ಬಾರಿ ಯೋಚಿಸಬೇಕು. ಅವರು ಬಿಜೆಪಿ ಎದುರು ಗೆಲ್ಲಲು ಸಾಧ್ಯವಾಗಲಿಲ್ಲ. ಆದ್ದರಿಂದ ಇಂತಹ ಟೀಕೆ, ದೋಷಾರೋಪಗಳನ್ನು ಮಾಡುತ್ತಿದ್ದಾರೆ' ಎಂದು ಮಾಯಾವತಿ ತೀಕ್ಷ್ಣವಾಗಿ ಹೇಳಿದ್ದಾರೆ.
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಕೂಡಾ ತಮ್ಮ ಬಹುಜನ ಸಮಾಜ ಪಕ್ಷದ ಮಾನಹಾನಿಗೆ ಪ್ರಯತ್ನಿಸಿದರು. ಈಗ ಪ್ರಿಯಾಂಕಾ ಗಾಂಧಿ ಕೂಡಾ ಅದೇ ರೀತಿ ಮಾಡುತ್ತಿದ್ದಾರೆ. ನಾನು ಇಡಿ ಮತ್ತಿತರ ಸಂಸ್ಥೆಗಳಿಗೆ ಹೆದರುತ್ತೇನೆ ಎಂದು ಹೇಳುತ್ತಿದ್ದಾರೆ. ಇದೆಲ್ಲವೂ ನಿಜವಲ್ಲ. ನಾವು ಈ ಎಲ್ಲಾ ಸಮಸ್ಯೆಗಳನ್ನು ಸುಪ್ರೀಂಕೋರ್ಟ್ ನಲ್ಲಿ ಹೋರಾಡಿ ಗೆದ್ದಿದ್ದೇವೆ ಎಂದು ಅವರು ತಿಳಿದುಕೊಳ್ಳಬೇಕು ಎಂದು ಮಾಯಾವತಿ ಹೇಳಿದ್ದಾರೆ.
PublicNext
10/04/2022 05:44 pm