ದಾವಣಗೆರೆ: ಬಿಜೆಪಿಯಲ್ಲಿ ಹೆಚ್.ಎಸ್. ನಾಗರಾಜ್ ಇದ್ದಾರೋ ಇಲ್ಲವೋ ಎಂಬ ಗೊಂದಲ ಕಮಲಪಡೆ ನಾಯಕರಲ್ಲಿದೆ. ಬಿಜೆಪಿ ದಾವಣಗೆರೆ ದಕ್ಷಿಣ ಮಂಡಲ ಅಧ್ಯಕ್ಷ ಆನಂದರಾವ್ ಶಿಂಧೆ ಹೇಳುವ ಪ್ರಕಾರ ಬಿಜೆಪಿಗೂ ನಾಗರಾಜ್‌ಗೂ ಯಾವುದೇ ಸಂಬಂಧ ಇಲ್ಲ. 2019ರಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದರೆ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಹೇಳಿದ್ದೇ ಬೇರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆನಂದರಾವ್ ಶಿಂಧೆ ಚುನಾವಣೆ ಬಂದಾಗ ಚುನಾವಣೆ ಉದ್ದೇಶ ಇಟ್ಟುಕೊಂಡು ಪಕ್ಷದ ಬಗ್ಗೆ ನಿಷ್ಠೆಯನ್ನು ತೋರಿಸುವ ವ್ಯಕ್ತಿಗಳು ಬೇಡ. ಇತ್ತೀಚಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸದಂತ ವ್ಯಕ್ತಿಗಳು, ಪಕ್ಷಕ್ಕೆ ಸಂಬಂಧ ಇಲ್ಲದ ವ್ಯಕ್ತಿಗಳು ದಾವಣಗೆರೆ ದಕ್ಷಿಣ ಮಂಡಲ ಕ್ಷೇತ್ರದಲ್ಲಿ ಚುನಾವಣೆ ಹತ್ತಿರಬರುತ್ತಿದ್ದಂತೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಸ್ವಯಂಘೋಷಿತವಾಗಿ ಹೇಳಿಕೊಳ್ಳುತ್ತಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ 2019ರಲ್ಲಿ ಹೆಚ್. ಎಸ್. ನಾಗರಾಜ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಈ ಕಾರಣ ಅವರಿಗೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಹೇಳಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರೇಶ್ ಹನಗವಾಡಿ ಅವರು, ಹೆಚ್. ಎಸ್. ನಾಗರಾಜ್ ಅವರು ಪಕ್ಷದಲ್ಲಿ ಇದ್ದಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ. ಈಗ ಪಕ್ಷದಲ್ಲಿ ಸಕ್ರಿಯವಾಗಿಲ್ಲ ಎಂಬುದು ಗೊತ್ತಿಲ್ಲ. ಬಿಜೆಪಿಗೆ ಮಿಸ್ಡ್ ಕಾಲ್ ಕೊಟ್ಟರೆ ಡಿಜಿಟಲ್ ಸದಸ್ಯತ್ವ ಪಡೆಯಬಹುದು. ಅವರು ಪಡೆದಿದ್ದಾರೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡುವುದಾಗಿ ಹೇಳಿದರು.
PublicNext
09/04/2022 04:23 pm