ಬೆಂಗಳೂರು: ಹಲಾಲ್ ಕಟ್, ಜಟಕಾ ಕಟ್ ವಿವಾದದ ನಂತರ ಈಗ ಮಸೀದಿಗಳಲ್ಲಿ ಧ್ವನಿವರ್ದಕ ಬಳಸುತ್ತಿರುವುದಕ್ಕೆ ವಿರೋಧಿಸಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಇಂತಹ ವಿವಾದಗಳನ್ನು ಸೃಷ್ಟಿಸಿ ಜನಸಾಮಾನ್ಯರ ನೈಜ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ ಎಂದಿದ್ದರು.
ಈ ಬಗ್ಗೆ ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. 'ಮಕ್ಕಳಲ್ಲಿ ಸಾತ್ವಿಕ ಸಂಸ್ಕಾರವನ್ನು ಬೆಳೆಸೋಣ. ಅದರ ಹೊರತಾಗಿ ಇನ್ನೊಂದು ಧರ್ಮದ ನಂಬಿಕೆಗಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸೋಣ' ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಅವರು, 'ದೇವಾಲಯಗಳಲ್ಲಿ ಮಹಾ ಮಂಗಳಾರತಿ ಸಂದರ್ಭಗಳಲ್ಲಿ ಢಮರುಗ, ಜಾಗಟೆ, ಘಂಟೆ ಇತ್ಯಾದಿಗಳನ್ನು ಭಾರಿಸುವ ಸಂಪ್ರದಾಯ ಇದ್ದೇ ಇದೆ. ಶಿವನಿಗೆ ಪ್ರಿಯವಾದ ಢಮರುಗ ಯಾರಿಗಾದರೂ ಕಿರಿಕಿರಿ ಮಾಡಿದೆಯೇ? ಇಲ್ಲವಲ್ಲ' ಎಂದಿದ್ದಾರೆ. ಹಾಗೂ 'ನಮ್ಮ ಮನೆಗಳಲ್ಲೂ ಬೆಳಗ್ಗೆಯೇ ಪೂಜೆ ನೆರೆವೇರಿಸಿ ಮಂಗಳಕರವಾದ ಘಂಟೆ ಭಾರಿಸುವುದನ್ನು ನಿತ್ಯವೂ ಕೇಳುತ್ತೇವೆ. ದೈವಕ್ಕೆ ಪ್ರಿಯವಾದ ಆ ಘಂಟೆಯ ಸದ್ದು ಯಾರಿಗೂ ಕಿರಿಕಿರಿ ಉಂಟು ಮಾಡಿಲ್ಲ. ಅದೂ ಅನಾದಿ ಕಾಲದಿಂದಲೂ ನಡೆದುಕೊಂಡೇ ಬಂದಿದೆ'. ಎಂದಿದ್ದಾರೆ.
ಸಂವಿಧಾನಕ್ಕೆ ನಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಉಲ್ಲೇಖಿಸಿರುವ ಕುಮಾರಸ್ವಾಮಿ 'ಭಾರತೀಯ ಸಂವಿಧಾನವು ಜಗತ್ತಿನ ಸರ್ವಶ್ರೇಷ್ಠ ಸಂವಿಧಾನ. ಅದರಲ್ಲಿ ಅಡಕವಾಗಿರುವ ಸಹಿಷ್ಣುತೆಯ ಆಶಯಕ್ಕೆ ಧಕ್ಕೆ ತರುವುದು ಬೇಡ. ಸಂಸತ್ತಿನಲ್ಲಿರುವ ಸಂವಿಧಾನ ಪ್ರತಿಗೆ ಶಿರಬಾಗಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯವನ್ನು ಹಿಂದೂ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರು ಮೋದಿ ಅವರ ಮೇಲ್ಪಂಕ್ತಿಯನ್ನು ಗೌರವಿಸಬೇಕು' ಎಂದಿದ್ದಾರೆ.
'ಹಿಂದುಗಳಾದ ನಾವು ನಮ್ಮ ದೇವರಿಗೆ ಭಕ್ತಿಯಿಂದ ಸಲ್ಲಿಸುವ ಸೇವೆಗಳಿಗೆ ಮುಸ್ಲೀಮರು ಸೇರಿ ಅನ್ಯ ಧರ್ಮದ ಯಾರಿಂದಲೂ ಆಕ್ಷೇಪ ಇಲ್ಲದಿರುವಾಗ ಮಸೀದಿಗಳ ಧ್ವನಿವರ್ಧಕಗಳ ಬಗ್ಗೆ ತಕರಾರು ತೆಗೆಯುವುದು ಏಕೆ? ಅಗತ್ಯಬಿದ್ದರೆ, ಶಬ್ದದ ಪ್ರಮಾಣವನ್ನು ವೈಜ್ಞಾನಿಕವಾಗಿ ಚಿಂತಿಸಿ ಕಡಿಮೆ ಮಾಡಲಿ. ಆ ಬಗ್ಗೆ ಮುಸ್ಲಿಂ ಧರ್ಮಗುರುಗಳೂ ಆಲೋಚನೆ ಮಾಡಲಿ' ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
PublicNext
05/04/2022 12:28 pm