ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾ - ಉಕ್ರೇನ್ ಸಮರ : ಭಾರತದ ಮಧ್ಯಸ್ಥಿಕೆಗೆ ದೈತ್ಯ ರಾಷ್ಟ್ರಗಳ ದುಂಬಾಲು

ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ : ಕೇಶವ ನಾಡಕರ್ಣಿ

ವಿಶ್ವವನ್ನೇ ತಲ್ಲಣಗೊಳಿಸಿದ ರಷ್ಯಾ - ಉಕ್ರೇನ್ ಸಮರ ಆರನೇ ವಾರಕ್ಕೆ ಕಾಲಿಡುತ್ತಿದೆ. ಯುದ್ಧದ ಭೀಕರತೆ ವರ್ಣಿಸಲಾಗದು. ಸರ್ವ ನಾಶವಾಗುತ್ತಿದ್ದರೂ ಮಣಿಯದ ಉಕ್ರೇನ್ ಪ್ರತಿರೋಧದಿಂದ ರಷ್ಯಾ ಜಂಘಾಬಲವೇ ಉಡುಗುತ್ತಿದೆ.

ಇದರ ದುಷ್ಪರಿಣಾಮದಿಂದಾಗಿ ಬಹುತೇಕ ದೇಶಗಳ ರಫ್ತು ವ್ಯವಹಾರ ನೆಲಕಚ್ಚಿದೆ. ರಫ್ತು ವ್ಯವಹಾರಗಳು ಠಪ್ ಆಗಿವೆ. ಭಾರತಕ್ಕೂ ಇದರ ಬಿಸಿ ತಟ್ಟಿದ್ದು ನಿತ್ಯ ಇಂಧನ ಬೆಲೆ ಆಕಾಶಕ್ಕೆ ನೆಗೆಯುತ್ತಿದೆ.

ಅಮೇರಿಕ ಸೇರಿದಂತೆ ಇತರೆ ಪ್ರಮುಖ ರಾಷ್ಟ್ರಗಳೊಂದಿಗೆ ಕೈಜೋಡಿಸಿರುವ ಜಪಾನ್ ಸಹ ರಷ್ಯಾ ಮೇಲೆ ಆರ್ಥಿಕ ದಿಗ್ಭಂಧನ ಹೇರಿದೆ. ಆದರೆ ಭಾರತ ತಟಸ್ಥ ನೀತಿ ತಾಳುವ ಮೂಲಕ ಪರೋಕ್ಷವಾಗಿ ದಿಗ್ಭಂಧನವನ್ನು ವಿರೋಧಿಸಿರುವುದು ಗಮನಾರ್ಹ.

ರಷ್ಯಾ - ಉಕ್ರೇನ್ ಸಮರ ವಿಷಯದಲ್ಲಿ ಭಾರತದ ತಟಸ್ಠ ನೀತಿಯನ್ನು ಅಮೇರಿಕ ಟೀಕಸಿದೆಯಲ್ಲದೆ ನಮ್ಮ ಮೇಲೆ ಆರ್ಥಿಕ ದಿಗ್ಬಂಧನ ಹೇರುವುದಾಗಿ ಬೆದರಿಕೆಯನ್ನೂ ಹಾಕಿತ್ತು. ಆದರೆ ಇದ್ಯಾವುದಕ್ಕೂ ಬಗ್ಗದ ಜಗ್ಗದ ಭಾರತ ತನ್ನ ಜಾಣ ನಡೆ ಮುಂದುವರಿಸಿದೆ.

ಭಾರತದ ತಟಸ್ಥ ನಿಲುವು ತಾಳಿರುವುದೇಕೆ ಎಂಬುದು ಈಗ ಅಮೇರಿಕ ಸೇರಿದಂತೆ ಜಪಾನ್, ಚೀನಾ, ಇಂಗ್ಲಂಡ್ , ಶ್ರೀಲಂಕಾ, ಜರ್ಮನಿ ಹಾಗೂ ಇತರೆ ರಾಷ್ಟ್ರಗಳಿಗೆ ಈಗ ಮನವರಿಕೆಯಾಗಿದೆ.

ಅದರ ಪರಿಣಾಮ ಯುದ್ಧ ಸಮಾಪ್ತಿಗೆ ಭಾರತ ಮಧ್ಯಸ್ಥಿಕೆ ವಹಿಸಬೇಕೆಂದು ಬಹಿರಂಗ ಹೇಳಿಕೆ ನೀಡಿದ್ದಲ್ಲದೆ ಬಹುತೇಕ ರಾಷ್ಟ್ರಗಳ ಹಣಕಾಸು, ವಿದೇಶಾಂಗ ವ್ಯವಹಾರ ಮಂತ್ರಿಗಳು, ರಾಷ್ಟ್ರೀಯ ಭದ್ರಾ ಸಲಹೆಗಾರರು ಕಳೆದ ಕೆಲವು ವಾರಗಳಿಂದ ಭಾರತ ಯಾತ್ರೆ ಆರಂಭಿಸಿ ಎರಡೂ ರಾಷ್ಟ್ರಗಳ ನಡುವೆ ಸಂಧಾನ ನಡೆಸಿ ಎಂದು ದುಂಬಾಲು ಬಿದ್ದಂತಿದೆ.

ಇದಕ್ಕೆ ಕಾರಣ ಸಂಯಮ, ದ್ವಿಪಕ್ಷೀಯ ಸಂಬಂಧ ಸುಧಾರಣೆ ಹಾಗೂ ವಿದೇಶಾಂಗ ನೀತಿಯಲ್ಲಿ ಭಾರತ ತೋರುತ್ತಿರುವ ಮುತ್ಸದ್ದಿತನ. ಇದೇ ಮುತ್ಸದ್ದಿತನದ ಪರಿಣಾಮ ಉಕ್ರೇನ್ ದಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮರಳಿ ಕರೆ ತರಲು ಸಾಧ್ಯವಾಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಜಪಾನ್ ಪ್ರಧಾನಿ ಪ್ಯೂಮಿಯೋ ಕ್ರಿಶಿದ್ , ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯಿ, ಇಂಗ್ಲೆಂಡ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರುಸ್, ಶ್ರೀಲಂಕಾದ ಹಣಕಾಸು ಸಚಿವ ಬಾಸಿಲ್ ರಾಜಪಕ್ಷೆ , ಜರ್ಮನಿಯ ಹಾಗೂ ಅಮೇರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಾರತಕ್ಕೆ ಭೇಟಿ ನೀಡಿದವರಲ್ಲಿ ಪ್ರಮುಖರು.

ಇನ್ನು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಭಾರತಕ್ಕೆ ಭೇಟಿ ನೀಡಿದ್ದಾರೆ ಎಂದು ಗೊತ್ತಾಗುತ್ತಲೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಫ್ರಾನ್ಸ್ ನ ಸೇನಾ ವಿಭಾಗದ ಮುಖ್ಯಸ್ಥರು ಸಹ ಭಾರತಕ್ಕೆ ಧಾವಿಸಿ ನಮ್ಮ ವಿದೇಶಾಂಗ ಸಚಿವ ಸುಬ್ರಮಣಿಯಂ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಜಾಗತೀಕ ಅಭದ್ರತೆಯಿಂದಾಗಿ ರಷ್ಯಾ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡು ಭಾರತದೊಂದಿಗಿನ ರಕ್ಷಣಾ ಸಂಬಂಧ ಸುಧಾರಿಸಿಕೊಳ್ಳಬೇಕಾಗಿದೆ ಎಂದು ಇಂಗ್ಲೆಂಡ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರುಸ್ ಹೇಳಿದ್ದಾರೆ.

ವಿಶ್ವದ ದೊಡ್ಡಣ್ಣ ಎಂದು ಹೇಳಿಕೊಳ್ಳುವ ಅಮೇರಿಕವೇ ಕೈ ಚೆಲ್ಲಿ ಕುಳಿತಿರುವಾಗ ದೈತ್ಯ ರಾಷ್ಟ್ರಗಳು ಭಾರತದ ಮಧ್ಯಸ್ಥಿಕೆಗೆ ಒಲವು ತೋರುತ್ತಿರುವುದು ನೋಡಿದಾಗ ಭಾರತ ಸದ್ದಿಲ್ಲದೆ ಜಾಗತಿಕ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂಬುದನ್ನು ಅಲ್ಲಗೆಳೆಯಲಾಗದು.

ಸೂಟು ಬೂಟು ಹಾಕಿಕೊಂಡು ಪ್ರಧಾನಿ ಮೋದಿ ವಿದೇಶ ಸುತ್ತುತ್ತಿದ್ದಾರೆ ಎಂದು ಈ ಹಿಂದೆ ಪ್ರಮುಖ ವಿರೋಧ ಪಕ್ಷಗಳ ನಾಯಕರು ಟೀಕಿಸಿದ್ದೇ ಟೀಕಿಸಿದ್ದು. ಕೇವಲ ರಾಜಕೀಯಕ್ಕಾಗಿ ಪ್ರಧಾನಿ ಮೋದಿಯವರನ್ನು ವಿರೋಧಿಸುವ ಹಲವು ನಾಯಕರಿಗೆ ಈಗ ಅದರ ಮಹತ್ವ ತಿಳಿದಿರಬಹುದು. ಒಂದು ವೇಳೆ ಆ ಸೂಕ್ಷ್ಮತೆ ಅರ್ಥವಾಗದಿದ್ದರೆ ದೊಡ್ಡ ದುರಂತ.

Edited By :
PublicNext

PublicNext

04/04/2022 08:41 am

Cinque Terre

48.69 K

Cinque Terre

49

ಸಂಬಂಧಿತ ಸುದ್ದಿ