ಬೆಂಗಳೂರು: ಸದಸ್ಯತ್ವ ಅಭಿಯಾನದಲ್ಲಿ ಕಾಂಗ್ರೆಸ್ ನಾಯಕರಿಗೆ ನಿರೀಕ್ಷಿತ ಗುರಿಯನ್ನೂ ತಲುಪಲಾಗಿಲ್ಲ. ಹಿಂದುತ್ವದ ವಿರುದ್ಧ ಮಾತನಾಡಿದ ಸಿದ್ದರಾಮಯ್ಯ ಸದಸ್ಯತ್ವ ಅಭಿಯಾನದಲ್ಲಿ ಸೋತು ಸುಣ್ಣವಾಗಿದ್ದಾರೆ. ಸದ್ಯ ಡಿ.ಕೆ ಶಿವಕುಮಾರ್ ಅವರ ನಾಯಕತ್ವವನ್ನು ಮುಗಿಸುವುದೇ ಸಿದ್ದರಾಮಯ್ಯ ಅವರ ಗುರಿ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಹೇಳಿದೆ.
ಕೆಪಿಸಿಸಿ ಮೇಲೆ ವಾಗ್ದಾಳಿ ನಡೆಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸದಸ್ಯತ್ವ ಅಭಿಯಾನದಲ್ಲಿ ನಿರೀಕ್ಷಿತ ಗುರಿ ತಲುಪಲಾರದೆ ಸೋತು ಸುಣ್ಣವಾಗಿರುವ ಭ್ರಷ್ಟಾಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಈಗ ಸಿದ್ದರಾಮಯ್ಯ ವಿಲನ್ ಆಗಿ ಪರಿಣಮಿಸಿದ್ದಾರೆ. ಇದನ್ನು ನೋಡಿಯೂ, ಡಿಕೆಶಿ ಅಸಹಾಯಕ ಎಂಬಂತಾಗಿದ್ದಾರೆ. 'ಧರ್ಮಗುರುಗಳ ವಿರುದ್ಧ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಅವರ ಪುತ್ರರತ್ನ ಡಾ.ಯತೀಂದ್ರ ಅವರಿಗೆ ಮಾತ್ರ ಸಂತೋಷ ನೀಡಿದೆ. ಎಷ್ಟೆಂದರೂ ತಂದೆಯಂತೇ ಮಗನಲ್ಲವೇ! ಆದರೆ ಕಾಂಗ್ರೆಸ್ ಪಕ್ಷದ ಇತರೆ ನಾಯಕರು ಇದನ್ನು ಸಮರ್ಥಿಸುತ್ತಾರೆಯೇ? ನಿಮ್ಮ ನಿಲುವೇನು ಅಸಹಾಯಕ ಡಿಕೆಶಿ ಅವರೇ? ಎಂದು ರಾಜ್ಯ ಬಿಜೆಪಿ ಖಾರವಾಗಿ ಪ್ರಶ್ನೆ ಮಾಡಿದೆ.
'ತಮ್ಮ ವಿರುದ್ಧ ಉಗ್ರಪ್ಪ ಹೇಳಿಕೆ ನೀಡಿದರೂ ಡಿಕೆಶಿ ಏನು ಮಾಡಲಿಲ್ಲ. ಕೆಪಿಸಿಸಿ ಪ್ರಚಾರ ಸಮಿತಿಗೆ ಎಂ.ಬಿ.ಪಾಟೀಲರನ್ನು ಕಾರ್ಯಾಧ್ಯಕ್ಷರನ್ನಾಗಿ ಮಾಡಿದಾಗಲೂ ಮೌನಕ್ಕೆ ಶರಣಾದರು. ಹಿಜಾಬ್ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಿ ಎಂದು ತಿಳಿ ಹೇಳಿದಾಗಲೂ ಸಿದ್ದರಾಮಯ್ಯ ಮಾತೇ ಕೇಳಲಿಲ್ಲ. ಇದರರ್ಥ ಡಿಕೆಶಿ ಅಸಹಾಯಕರೇ ಎಂದು ಪ್ರಶ್ನಿಸಿದೆ'. 'ಹಿಜಾಬ್ಗೂ ಸ್ವಾಮೀಜಿಗಳಿಗೂ ಏನು ಸಂಬಂಧ ಸಿದ್ದರಾಮಯ್ಯನವರೇ? ಮತಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುವ ಭರದಲ್ಲಿ ಸಿದ್ದರಾಮಯ್ಯ ಅವರು ಪ್ರತಿ ಹಂತದಲ್ಲೂ ಹಿಂದೂಗಳ ಭಾವನೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರ ಖಂಡನೀಯ ನಡೆ' ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
PublicNext
28/03/2022 05:20 pm