ಬೆಂಗಳೂರು: ನಿಮ್ಮ ಅಧಿಕಾರದ ಅವಧಿಯಲ್ಲಿ ದನಗಳ್ಳರಿಗೆ ₹10 ಪರಿಹಾರ ಕೊಡುವಾಗ ಕೊಂದವರು, ಕೊಲೆಯಾದವರು ನಿಮಗೆ ನೆನಪಾಗಲಿಲ್ಲವೇ ಸಿದ್ದರಾಮಯ್ಯ ಅವರೇ?
ಹೀಗೆ ಪ್ರಶ್ನೆ ಮಾಡಿ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಕೊಟ್ಟಿದ್ದನ್ನು ಪ್ರಶ್ನೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಹರಿಹಾಯ್ದ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ನೀವು ಮುಖ್ಯಮಂತ್ರಿ ಆಗಿದ್ದಾಗ ದನಗಳ್ಳನನ್ನು ಶೂಟ್ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ರಿ. ದನಗಳ್ಳನಿಗೆ ₹10 ಲಕ್ಷ ಪರಿಹಾರ ಕೊಟ್ಟಿರಲ್ಲವೇ? ಆಗ ಕೊಂದವರು ಕೊಲೆ ಆದವರು ಯಾರೆಂಬ ಬಗ್ಗೆ ನಿಮಗೆ ಪಶ್ನೆ ಕಾಡಲಿಲ್ಲವೇ ಎಂದು ಸಿದ್ದರಾಮಯ್ಯ ಅವರನ್ನು ರಾಜ್ಯ ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.
ಇನ್ನೊಂದು ಟ್ವೀಟ್‌ನಲ್ಲಿ ಸಿದ್ದರಾಮಯ್ಯ ಅವರ ನಡೆಯನ್ನು ಖಂಡಿಸಿರುವ ಬಿಜೆಪಿ, 'ಮಾನ್ಯ ಸಿದ್ದರಾಮಯ್ಯನವರೇ, ಓಲೈಕೆಗೂ ಒಂದು ಮಿತಿ ಎನ್ನುವುದಿರುತ್ತದೆ. ನೀವು ಅದೆಲ್ಲವನ್ನೂ ದಾಟಿ ಸಾಗುತ್ತಿದ್ದೀರಿ. ಮೊದಲನೆಯದಾಗಿ ಹಿಜಾಬ್, ದುಪ್ಪಟ್ಟ, ಮುಂಡಾಸು, ಪೇಟ ಇವುಗಳ ನಡುವಿನ ವ್ಯತ್ಯಾಸವನ್ನು ಮೊದಲು ಅರಿತುಕೊಳ್ಳಿ. ಹಿಜಾಬ್ ನಿಷೇಧಿಸಿಲ್ಲ, ತರಗತಿಯೊಳಗೆ ಹಿಜಾಬ್‌ಗೆ ಅವಕಾಶ ನಿರಾಕರಿಸಲಾಗಿದೆ, ಅಷ್ಟೇ'. 'ಸುಳ್ಳುಗಳ ಹೊರತಾಗಿ ನಿಮ್ಮ ರಾಜಕೀಯ ನಡೆಯುವುದಿಲ್ಲ, ಅಲ್ವೇ ಸಿದ್ದರಾಮಯ್ಯ? ಹಿಜಾಬ್ ವಿಚಾರದಲ್ಲಿ ಹಿಜಾಬ್ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು, ನ್ಯಾಯಾಲಯ ಇವರ ಹೇಳಿಕೆಗೆ ವಿರುದ್ಧವಾದ ತೀರ್ಪು ನೀಡಿತು. ರಾಷ್ಟ್ರಧ್ವಜವೇ ಇರದ ಸ್ಥಂಭದಲ್ಲಿ ರಾಷ್ಟ್ರಧ್ವಜ ತೆಗೆದು ಕೇಸರಿ ಧ್ವಜ ಹಾಕಿದ್ದಾರೆ ಎಂಬ ಸುಳ್ಳು ಹೇಳಿದರು' ಎಂದು ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ನಡೆಸಿದೆ.
PublicNext
25/03/2022 04:13 pm