ಬಳ್ಳಾರಿ: ಆರೋಗ್ಯ ಸಚಿವ ಸುಧಾಕರ್ ಏನು ಮುಖ್ಯಮಂತ್ರಿಗಳಿಗಿಂತ ದೊಡ್ಡವರಾ? ಒಬ್ಬ ಶಾಸಕನಾಗಿ ನಾನು ಅವರಿಗೆ ನಾಲ್ಕೈದು ಬಾರಿ ಕರೆ ಮಾಡಿದ್ದೇನೆ. ಆದರೂ ಕರೆ ಸ್ವೀಕರಿಸಿಲ್ಲ. ವೈಯಕ್ತಿಕವಾಗಿ ನಾನು ನನ್ನ ನಂಬರ್‌ನಿಂದ ಮೆಸೇಜ್ ಕಳಿಸಿದ್ದೇನೆ ಅದಕ್ಕೂ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಗ್ಯ ಸಚಿವರ ವಿರುದ್ಧ ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಕೆಂಡಾಮಂಡಲವಾಗಿದ್ದಾರೆ.
ಸ್ವಪಕ್ಷದ ಸಚಿವರ ವಿರುದ್ಧವೇ ಸೋಮಶೇಖರ್ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಕೆಲ ಸಚಿವರು ದೇವಲೋಕದಿಂದ ಬಂದಿದ್ದೇವೆ ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ಅವರೇನು ಮೇಲಿಂದ ಬಂದವರೇ? ಅವರು ದೇವಮಾನವರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
ನಿನ್ನೆ ಕಲ್ಯಾಣ ಕರ್ಣಾಟಕದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿತ್ತು. ಕಲ್ಯಾಣ ಕರ್ಣಾಟಕದ ಮೀಸಲಾತಿಯಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳ ಸೀಟ್ ಏಕಾಏಕಿ ಕಡಿತ ಮಾಡಲಾಗಿತ್ತು. ಹೀಗಾಗಿ ಆರೋಗ್ಯ ಸಚಿವ ಸುಧಾಕರ್ ಅವರಿಗೆ ನಾನು ಹಲವು ಸಾರಿ ಕರೆ ಮಾಡಿದ್ದೆ. ಅವರ ಆಪ್ತ ಸಹಾಯಕನಿಗೂ ಕರೆ ಮಾಡಿದ್ದೇನೆ. ಬಳಿಕ ಅವರಿಗೆ ಮೆಸೇಜ್ ಸಹ ಹಾಕಿದ್ದೆ. ಆದರೆ ಅವರು ಯಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ. ಇದೇ ವಿಚಾರವಾಗಿ ನಾವು ಸಿಎಂ ಬೊಮ್ಮಾಯಿ ಬಳಿಯೂ ಹೋಗಿದ್ದೆ, ಅವರು ಕೇವಲ 30 ಸೆಕೆಂಡ್‌ನಲ್ಲಿ ಕೆಲಸ ಮಾಡಿಕೊಟ್ಟರು ಎಂದ ಸೋಮಶೇಖರ್, ಸುಧಾಕರ್ ಮೇಲೆ ಆಕ್ರೋಶಿತರಾಗಿದ್ದಾರೆ.
PublicNext
02/02/2022 08:14 pm