ದಾವಣಗೆರೆ: ಕೊರೊನಾ ಹಾಗೂ ಒಮಿಕ್ರಾನ್ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಜನವರಿ 14 ಮತ್ತು 15 ರಂದು ಹಮ್ಮಿಕೊಳ್ಳಲಾಗಿದ್ದ ಹರಜಾತ್ರೆಯನ್ನು ಮುಂದೂಡಲಾಗಿದೆ.
ಹರಿಹರದ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಹರ ಜಾತ್ರೆಯನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಗಿದೆ. ಹರಜಾತ್ರೆ ನಡೆದೇ ನಡೆಯುತ್ತದೆ. ಯಾವುದೇ ಕಾರಣಕ್ಕೂ ಸಮಾಜ ಬಾಂಧವರಲ್ಲಿ ತಪ್ಪು ಸಂದೇಶ ಹೋಗಬಾರದು. ಹರಜಾತ್ರೆಯನ್ನು ಮುಂದೂಡಲಾಗಿದೆ ಅಷ್ಟೇ ಎಂದು ಹರಿಹರ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಮಠದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೆಡೆ ನಾವು ಹೇಳಿದ್ದೇ ಬೇರೆ ಇರುತ್ತೆ. ಸಂದೇಶವೇ ಬೇರೆ ಹೋಗಿರುತ್ತದೆ. ಹರಜಾತ್ರೆ ಸಮಯ ಮುಂದೂಡಲಾಗಿದೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಜಾತ್ರೆಯ ದಿನಾಂಕ ನಿಗದಿ ಮಾಡುತ್ತೇವೆ. ಕೋವಿಡ್ ಅಲೆಗಳ ಮುಗಿದ ಮೇಲೆ ಹರ ಅಲೆ ವಾತಾವರಣ ನಿರ್ಮಾಣ ಆಗುತ್ತದೆ. ಸಾವಿರಾರು ಜನರು ಹರಮಾಲೆ ಧರಿಸಿದ್ದಾರೆ. ಇಂದೂ ಸಹ ಹರಮಾಲೆ ಧರಿಸಿದ್ದು, ರುದ್ರಾಕ್ಷಿ ತೆಗೆಯುವುದಿಲ್ಲ. ಜನವರಿ 14 ರಂದು ಮನೆ ಮನೆಯಲ್ಲೇ ಹರ ಮಾಲೆ ಸಂಕಲ್ಪ ಸಮರ್ಪಣಾ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದರು.
ರುದ್ರಾಕ್ಷಿ ಮಾಲೆ ಧರಿಸಿ ನಿತ್ಯವೂ ಮನೆಯಲ್ಲಿ ಹರನಾಮ ಜಪ, ಲಿಂಗ ಪೂಜೆ ಮಾಡಬೇಕು ಎಂಬ ಕಾರ್ಯಕ್ರಮದಲ್ಲಿ ಮನೆಯಲ್ಲೇ ಒಂದು ಗಂಟೆಗಳ ಕಾಲ ಇದನ್ನು ಮಾಡಬೇಕು. ಪ್ರತಿಯೊಬ್ಬರಿಗೂ ಮಾನಸಿಕ ನೆಮ್ಮದಿ ಸಿಗಬೇಕು ಎಂಬ ಉದ್ದೇಶದಿಂದ ಮತ್ತು ಕೋವಿಡ್ ಇರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 21 ದಿನಗಳ ಕಾಲ ಸಂಕಲ್ಪ ಮಾಡಲಿದ್ದಾರೆ ಎಂದು ಶ್ರೀಗಳು ಮಾಹಿತಿ ನೀಡಿದರು.
PublicNext
10/01/2022 05:20 pm