ನವದೆಹಲಿ: ವಿಶ್ವದ ಬಲಿಷ್ಠ ರಾಷ್ಟ್ರಗಳಲ್ಲಿ ಭಾರತವೂ ಒಂದು. ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾದ ಮೇಲೆ ಇಡೀ ವಿಶ್ವ ಭಾರತವನ್ನು ತಲೆ ಎತ್ತಿ ನೋಡುವಂತಾಗಿದೆ. ರಾಜಕೀಯ ಏನೇ ಇರಲಿ. ಒಬ್ಬ ಪ್ರಧಾನಿಗೆ ಗೌರವ ಕೊಡಬೇಕಾದದ್ದು ಆಯಾ ರಾಜ್ಯ ಸರ್ಕಾರಗಳ ಪ್ರಮುಖ ಜವಾಬ್ದಾರಿ. ಯಾವುದೇ ಒಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಧಾನಮಂತ್ರಿ ಆಗಿದ್ದರೆ ಅವರಿಗೆ ಭದ್ರತೆ ಹಾಗೂ ಗೌರವ ಕೊಡಬೇಕಾಗುತ್ತದೆ. ಇಂತಹ ವಿಷಯದಲ್ಲಿ ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ನಡೆದುಕೊಂಡ ರೀತಿಯೇ ಬೇರೆಯಾಗಿತ್ತು. ಒಬ್ಬ ಪ್ರಧಾನಿ ಪಾಪಿ ಪಾಕಿಸ್ತಾನದ ಗಡಿ ಸಮೀಪ 20 ನಿಮಿಷ ಬಂಧನದ ಸ್ಥಿತಿಯಲ್ಲಿ ನಿಂತು, ನಾನು ಸುರಕ್ಷಿತವಾಗಿ ಬಂದಿದ್ದೇನೆ ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ ಎಂದು ಹೇಳುತ್ತಾರೆ ಎಂದರೆ ಅವರ ತಲೆಯಲ್ಲಿ ಆ 20 ನಿಮಿಷ ಏನೆಲ್ಲ ವಿಚಾರಗಳು ಓಡಾಡಿರಬಹುದು ಎಂಬುದನ್ನು ಊಹಿಸಿಕೊಳ್ಳಿ.
ಪಂಜಾಬ್ ರಾಜ್ಯಕ್ಕೆ ಪ್ರಧಾನಿ ಮೋದಿ ಅವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಪ್ರವಾಸ ಕೈಗೊಂಡಿದ್ದರು. ಹೆಲಿಕಾಪ್ಟರ್ ಮೂಲಕವೇ ಅವರು ಅಲ್ಲಿಗೆ ಭೇಟಿ ನೀಡಬೇಕಿತ್ತು. ಆದರೆ, ಕಾರಣಾಂತರಗಳಿಂದ ರಸ್ತೆ ಮೂಲಕವೇ ಅವರು ತೆರಳಬೇಕಾದ ಅನಿವಾರ್ಯತೆ ಎದುರಾಯಿತು. ಪ್ರಧಾನಿಗಳ ಭದ್ರತೆಗಾಗಿ ಅಲ್ಲಿನ ಪೊಲೀಸ್ ಮಹಾನಿರ್ದೇಶಕ ಹಾಗೂ ಸರ್ಕಾರಕ್ಕೆ ಕೇಂದ್ರದ ಭದ್ರತಾ ಸಚಿವಾಲಯ ಆಗಲೇ ಮುನ್ಸೂಚನೆ ಕೂಡ ನೀಡಿತ್ತು. ಆದರೂ ಶಿಷ್ಟಾಚಾರದ ಪ್ರಕಾರ ಪ್ರಧಾನಿಯನ್ನು ಸ್ವಾಗತಿಸಲು ಪಂಜಾಬ್ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಹೋಗಲಿಲ್ಲ. ಪಂಜಾಬ್ ಮುಖ್ಯಮಂತ್ರಿ ಮತ್ತು ಡಿಜಿಪಿ ಫೋನ್ ಕರೆಗಳನ್ನೇ ಸ್ವೀಕರಿಸಲಿಲ್ಲ ಎಂಬ ಆರೋಪವೂ ಇದೆ. ಅತೀ ಉದ್ದದ ಫ್ಲೈ ಓವರ್ ಮೇಲೆ 20 ನಿಮಿಷಗಳ ಕಾಲ ಪ್ರಧಾನಿಗಳ ಇಡೀ ಭಧ್ರತಾ ತಂಡದ ಸಮೇತ ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರಧಾನಿಯವರ ಕಾರಿನ 2-3 ಮೀಟರ್ ಅಂತರದಲ್ಲಿ 10-15 ಜನ ಫ್ಲೈಓವರ್ ಮೇಲೆಯೇ ಬಂದು ಅವರ ವಿರುದ್ಧ ಪ್ರತಿಭಟನೆ ನಡೆಸಿದರು. 20 ನಿಮಿಷಗಳ ಕಾಲ ಮೋದಿ ಹಾಗೂ ಭದ್ರತಾ ಸಿಬ್ಬಂದಿ ಅಕ್ಷರಶಃ ಬಂಧನದ ಸ್ಥಿತಿಯಲ್ಲಿ ಇದ್ದರು. ಈ ಘಟನೆ ನಡೆದದ್ದು, ಪಾಕಿಸ್ತಾನ ಗಡಿ ಭಾಗ ಕೇವಲ 10 ಕಿಲೋ ಮೀಟರ್ ದೂರದಲ್ಲಿ ಇರುವಾಗ ಎಂಬುದು ಆತಂಕಕಾರಿ ವಿಷಯ. ಈ ಸಂದರ್ಭದಲ್ಲಿ ಯಾವುದೇ ಮಿಸೈಲ್ ದಾಳಿ ಕೂಡ ನಡೆಯಬಹುದಿತ್ತು.
ಫ್ಲೈ ಓವರ್ ಕೆಳಗೆ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಮತ್ತು ಹತ್ತಾರು ಲಾರಿಗಳನ್ನು ನಿಲ್ಲಿಸಲಾಗಿತ್ತು. ಘಟನೆಯ ಸ್ಥಳದಲ್ಲಿ ದಟ್ಟ ಮಂಜು ಕವಿದಿತ್ತು. ಆಗ 10 ಜನ ಯಾವುದೇ ಗ್ರೈನೆಟ್ ಎಸೆಯಬಹುದಾದ ಅಂತರದಲ್ಲಿ ಸಂಚರಿಸಿದ್ದಾರೆ. ಪಂಜಾಬ್ ಡಿಜಿಪಿ, ಪ್ರಧಾನಿಯವರ ತಂಡದ ಸಂಚಾರಕ್ಕೆ ಅನುಮತಿ ಕೊಟ್ಟ ನಂತರ ಭದ್ರತೆಯ ರಿಹರ್ಸಲ್ ನಡೆಸಿದ ನಂತರವೂ ತಾವು ಸ್ಥಳದಲ್ಲಿ ಇರದೇ ಇದ್ದದ್ದು ಮತ್ತು ಫೋನ್ ಕಾಲ್‌ಗಳನ್ನೂ ಸ್ವೀಕರಿಸದೇ ಇದ್ದದ್ದು ನೋಡಿದರೆ ಇದು ಎಂತಹ ಕರ್ತವ್ಯ ಲೋಪ ಎಂಬುದು ಗೊತ್ತಾಗುತ್ತದೆ.
ಇದಾದ ಬಳಿಕ ಕೆಲವೇ ನಿಮಿಷದ ಒಳಗೆ ಕಾಂಗ್ರೆಸ್ ನಾಯಕರು ಘಟನೆಯನ್ನು ಸಂಭ್ರಮಿಸಿ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಭದ್ರತಾ ವೈಫಲ್ಯದಿಂದಾಗಿ ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ ಹಾಗೂ ಇಂದಿರಾಗಾಂಧಿ ಅವರನ್ನು ಕಳೆದುಕೊಂಡ ಘಟನೆಗಳು ಕಣ್ಣಮುಂದೆಯೇ ಇವೆ. ಹೀಗಿರುವಾಗ ಒಬ್ಬ ಪ್ರಧಾನಿಗೆ ಯಾವ ರೀತಿಯ ಭದ್ರತೆ ನೀಡಬೇಕು ಎಂಬ ಸಾಮಾನ್ಯ ಅರಿವು ಕೂಡ ಪಂಜಾಬ್ ಸರ್ಕಾರಕ್ಕೆ ಇಲ್ಲದೇ ಹೋದಂತಾಗಿದೆ. ರಾಜಕೀಯ ಏನೇ ಇರಲಿ ದೇಶದ ಪ್ರಧಾನಿಗೆ ಗೌರವ ಕೊಡುವ ಸಂಸ್ಕಾರವನ್ನು ಅಲ್ಲಿನ ಸರ್ಕಾರ ಮತ್ತೊಮ್ಮೆ ಕಲಿಯಬೇಕಾಗಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್.
PublicNext
06/01/2022 07:38 am