ಬೆಳಗಾವಿ: ನಗರದಲ್ಲಿ ಎಂಇಎಸ್ ಪುಂಡಾಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೃತ್ಯ ಖಂಡಿಸಿ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್‌ಗೆ ಬಿಜೆಪಿ ಟಾಂಗ್ ಕೊಟ್ಟಿದೆ. ನೆರಮನೆಗೆ ಬೆಂಕಿ ಬಿದ್ದಾಗ ಚಳಿ ಕಾಯಿಸಿಕೊಳ್ಳಲು ಹೊರಟ ನಿಮ್ಮ ದುಷ್ಟಬುದ್ಧಿಗೆ ಧಿಕ್ಕಾರ ಎಂದು ಬಿಜೆಪಿ ಸಿದ್ದರಾಮಯ್ಯಗೆ ಟ್ವೀಟ್ ಮೂಲಕ ಉತ್ತರ ಕೊಟ್ಟಿದೆ.
ಇಂದು ಶನಿವಾರ ಬೆಳ್ಳಗ್ಗೆ ಈ ಘಟನೆ ಸಂಬಂಧ ಸಿದ್ದರಾಮಯ್ಯ ಅವರು ತಮ್ಮ ಟ್ವಿಟ್ಟರ್‌ನಲ್ಲಿ, ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಮುಖ್ಯಮಂತ್ರಿ ಅವರು ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ ಆದೇಶ ನೀಡಬೇಕು. ಮುಖ್ಯಮಂತ್ರಿ ಅವರೇ,ಇದಕ್ಕೆಲ್ಲ ಕ್ರಿಯೆಗೆ ಪ್ರತಿಕ್ರಿಯೆ ಎಂಬ ಮೊಂಡುವಾದ ಮಂಡಿಸಬೇಡಿ. ಕಾನೂನಿನ ಕ್ರಮ ಇಂತಹ ಪುಂಡರಿಗೆ ಕಠಿಣ ಸಂದೇಶವಾಗಲಿ. ಇದೇ ವೇಳೆ ಕನ್ನಡ ಬಂಧುಗಳು ಆವೇಶಕ್ಕೆ ಒಳಗಾಗದೆ, ಸಂಯಮದಿಂದ ಶಾಂತಿ-ಸೌಹಾರ್ದತೆ ಕಾಪಾಡಿಕೊಂಡು ಬರಬೇಕೆಂದು ಮನವಿ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು.
ಸಿದ್ದರಾಮಯ್ಯ ಮಾಡಿದ್ದ ಈ ಟ್ವೀಟ್‌ನ ಸ್ಕ್ರೀನ್ ಶಾಟ್ ಸಮೇತ ಟ್ವೀಟ್ ಮಾಡಿದ ಬಿಜೆಪಿ, 'ಭಾಷಾಂಧರು ನಡೆಸಿದ ಕೃತ್ಯವನ್ನು ಕೋಮು ಸಂಘರ್ಷಕ್ಕೆ ಪರಿವರ್ತಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಎಲ್ಲದರಲ್ಲೂ ರಾಜಕೀಯ ಹುಡುಕುವುದೇ ಸಿದ್ದರಾಮಯ್ಯ ಅವರ ಚಾಳಿ. ಎಲ್ಲದಕ್ಕೂ ಸಂದರ್ಭ, ಉಚಿತಾನುಚಿತ ಪ್ರಜ್ಞೆ ಎನ್ನುವುದಿರುತ್ತದೆ. ಬೆಳಗಾವಿಯಲ್ಲಿ ದುಷ್ಕರ್ಮಿಗಳು ನಡೆಸಿದ ಪುಂಡಾಟವನ್ನು ಕೋಮು ದ್ವೇಷಕ್ಕೆ ಪರಿವರ್ತಿಸುವ ಇರಾದೆ ಏಕೆ? ನೆರಮನೆಗೆ ಬೆಂಕಿ ಬಿದ್ದಾಗ ಚಳಿ ಕಾಯಿಸಿಕೊಳ್ಳಲು ಹೊರಟ ನಿಮ್ಮ ದುಷ್ಟಬುದ್ಧಿಗೆ ಧಿಕ್ಕಾರ' ಎಂದು ಖಾರವಾಗಿ ಹೇಳಿದೆ.
PublicNext
18/12/2021 11:06 pm