ದಾವಣಗೆರೆ: ಕಾಂಗ್ರೆಸ್ ಬೀದಿಕಾಳಗ ನಡೆಸುವ ಪಾರ್ಟಿ. ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಲಪಾಡ್ಅಧ್ಯಕ್ಷರನ್ನಾಗಿಸಲು ಕಾಳಗವನ್ನೇ ನಡೆಸಿದರು. ಇನ್ನು ಅಖಂಡ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಬೆಂಕಿ ಹಚ್ಚಿದಾಗ ಕಾಂಗ್ರೆಸ್ ನವರು ಖಂಡಿಸಿದ್ರಾ. ದಲಿತರಿಗೆ ಮಾಡಿದ ಅನ್ಯಾಯ ಅಲ್ಲ. ಸ್ವಲ್ಪ ಯಾಮಾರಿದ್ದರೂ ಶ್ರೀನಿವಾಸ್ ಹತ್ಯೆಯಾಗಿ ಬಿಡದು. ವಿಶ್ವನಾಥ್ ಅವರನ್ನು ಹತ್ಯೆ ಮಾಡಲು 5 ಕೋಟಿ ರೂಪಾಯಿ ಸುಫಾರಿ ಕೊಟ್ಟಿದ್ದಾರೆ ಎಂಬ ಆರೋಪ ಕಾಂಗ್ರೆಸ್ ಮುಖಂಡನ ಮೇಲಿದೆ. ಇಂತವರನ್ನು ಡಿ. ಕೆ. ಶಿವಕುಮಾರ್ ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಕಾಂಗ್ರೆಸ್ ಗೂಂಡಾ ಪಾರ್ಟಿ ಅಲ್ಲವೇ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾರೆ. ಗೋಪಾಲ್ ಕೃಷ್ಣ ಅವರು ವಿಶ್ವನಾಥ್ ಅವರನ್ನ ಫಿನಿಷ್ ಮಾಡಬೇಕು ಎಂದು ಹೇಳಿದ್ದಾರಲ್ವಾ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದಲ್ವಾ. ಗೂಂಡಾಗಿರಿಗೆ ನೇರವಾಗಿ ಬೆಂಬಲಿಸುತ್ತಿದ್ದಾರೆ. ಮೊದಲು ಆತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ.
ಯಥಾ ರಾಜಾ ತಥಾ ಪ್ರಜಾ ಎಂಬಂತೆ ಕಾಂಗ್ರೆಸ್ ನವರು ಇದ್ದಾರೆ. ಬೀದಿ ಬೀದಿಗಳಲ್ಲಿ ಒಡೆದಾಡುತ್ತಿದ್ದಾರೆ. ಬೆಂಕಿ ಹಚ್ಚಿದವರು ಹಾಗೂ ಸ್ಕೆಚ್ ಹಾಕಿದವರನ್ನು ಸಮರ್ಥನೆ ಮಾಡಿಕೊಳ್ಳುವುದು ಕಾಂಗ್ರೆಸ್ ನ ಸಂಸ್ಕೃತಿನಾ. ಜನರು ಇಂತವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಗೆ ನಾವು ಬೆಂಬಲ ಕೇಳಿದ್ದೇವೆ. 19 ಕಡೆಗಳಲ್ಲಿ ಅವರ ಅಭ್ಯರ್ಥಿಗಳಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿರುವ ಜೆಡಿಎಸ್ ನ ಮತಗಳನ್ನು ನೀಡುವ ಮೂಲಕ ಸಹಾಯ ಮಾಡುವಂತೆ ಕೇಳಿದ್ದೇವೆ. ಅದರಲ್ಲಿ ತಪ್ಪೇನಿದೆ. ಜೆಡಿಎಸ್ ಸ್ಪರ್ಧೆ ಮಾಡಿದ್ದರೆ ತ್ರಿಕೋನ ಸ್ಪರ್ಧೆ ಏರ್ಪಡುತಿತ್ತು. ನಾವು 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದು ಭವಿಷ್ಯ ನುಡಿದರಲ್ಲದೇ, ಕಾಂಗ್ರೆಸ್ ಅನ್ನು ಹುಡುಕುವಂತಾಗಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಮಲ್ಲಿಕಾರ್ಜುನ್ ಖರ್ಗೆ, ಜಿ.ಪರಮೇಶ್ವರ್ ಇದ್ದಾರೆ ಎಂಬ ಕಾರಣಕ್ಕೆ ರಾಜ್ಯದಲ್ಲಿ ಸ್ವಲ್ಪ ಕಾಂಗ್ರೆಸ್ ಗೆ ಹೆಸರಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಇದೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದುವರಿದರೆ ಕಾಂಗ್ರೆಸ್ ಸಂಪೂರ್ಣವಾಗಿ ಮುಳುಗುತ್ತದೆ ಎಂದು ತಿಳಿಸಿದರು.
ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಹಿರಿಯರು. ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರ ಆರೋಗ್ಯ ವಿಚಾರಿಸಿದ್ದಾರೆ. ಈ ರೀತಿಯ ಭೇಟಿ ಮಾಡಿದ್ದಾರೆ. ಸಹಜ ಭೇಟಿ ಅಷ್ಟೇ ಎಂದು ಹೇಳಿದರು.
PublicNext
02/12/2021 04:46 pm