ಹುಬ್ಬಳ್ಳಿ: ಬಹುಕಾಲದಿಂದ ಜಿಲ್ಲಾ ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಅಸಮಾಧಾನ ಕೊನೆಗೂ ಭುಗಿಲೇಳುವ ಲಕ್ಷಣ ಕಾಣ ತೊಡಗಿವೆ.
ಕಾರಣ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರೇಮ. ರಾಜ್ಯ ವಿಧಾನ ಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ಚುನಾವಣೆಗೆ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಿರಿಯ ಬಿಜೆಪಿ ಧುರೀಣ ಶಂಕ್ರರಣ್ಣ ಮುನವಳ್ಳಿ ಸಜ್ಜಾಗಿರುವುದು ನೋಡಿದರೆ ಸಧ್ಯದ ಪರಿಸ್ಥಿತಿಯಲ್ಲಿ ಕಮಲ ಪಾಳಯದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಭಾಸವಾಗ ತೊಡಗಿದೆ.
" ನಾನು ಬಿಜೆಪಿಯಿಂದ ದ್ವಿತೀಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಕೇವಲ ತಮ್ಮ ತಮ್ಮನ ಸಲುವಾಗಿ ದಿಲ್ಲಿ ಸುತ್ತಾಡಿದ್ದಾರೆ ಎಂಬ ಮುನವಳ್ಳಿ ಅವರ ಅಸಮಾಧಾನದ ಮಾತುಗಳು ಈಗ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
" ನಾವು ಕಾರ್ಯಕರ್ತರು ಕೇವಲ ಪಲ್ಲಕ್ಕಿ ಮಾತ್ರ ಹೋರುವವರಾಗಬೇಕೆ '' ಎಂದು ಖಾರವಾಗಿ ಪ್ರಶ್ನಿಸಿರುವ ಶಂಕ್ರಣ್ಣ " ಅದಕ್ಕಾಗಿ ಈಗ ನಾನೂ ನಾಮಪತ್ರ ತಯಾರಿ ಮಾಡಿಕೊಂಡಿದ್ದೇನೆ. ಸೂಚಕರು ಸಹ ಸಹಿ ಮಾಡಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ನನ್ನ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವೆ '' ಎಂದಿದ್ದಾರಂತೆ.
ಶಂಕ್ರಣ ಮುನವಳ್ಳಿ ಅವರ ನಿರ್ಧಾರ ನಿಜವಾಗಿದೆಯೋ ವದಂತಿಯೋ ಗೊತ್ತಿಲ್ಲ. ಒಂದು ವೇಳೆ ಅದು ನಿಜವೇ ಆಗಿದ್ದಲ್ಲಿ ಶೆಟ್ಟರ್ ಗುಂಪಿಗೆ ಮುಜುಗರ ಸಹಜ. ಶಂಕ್ರಣ್ಣ ಕಣದಲ್ಲಿ ಉಳಿಯುವರೋ ಅಥವಾ ಮೇಲಿನ ಒತ್ತಡದಕ್ಕೆ ಮಣಿದು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವರೋ ನೋಡಬೇಕು.
PublicNext
23/11/2021 12:59 pm