ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಸಾವಿರಾರು ಕೋಟಿ ರೂ " ಬಿಟ್‌ಕಾಯಿನ್ '' ಹಗರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಕೊರಳು ಸುತ್ತಿಕೊಳ್ಳುವ ಎಲ್ಲ ಲಕ್ಷಣಗಳು ಕಾಣ ತೊಡಗಿವೆ.
ಈ ಹಗರಣದ ಕಿಂಗ್ ಪಿನ್ , ಬ್ಲ್ಯಾಕ್ ಕ್ಯಾಪ್ ಖ್ಯಾತಿ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ರಮೇಶ್ ನನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದಾಗ ಈ ಬೃಹತ್ ಮೊತ್ತದ ಹಗರಣ ಬಯಲಿಗೆ ಬಂದಿತ್ತು. ಆಗ ಗೃಹಮಂತ್ರಿಯಾಗಿದ್ದ ಬೊಮ್ಮಾಯಿಯವರೇ, ಇಂದು ರಾಜ್ಯದ ಮುಖ್ಯಮಂತ್ರಿ. ಆದರೆ ಈವೆರಗೂ ರಾಜ್ಯ ಸರ್ಕಾರವು ತನಿಖೆ ಪೂರ್ಣ ವಿವರ ಮುಚ್ಚಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.
ಹಾನಗಲ್ ಉಪಚುನಾವಣೆ ಸೋಲಿನ ಬಗ್ಗೆ ಹೈಕಮಾಂಡ್ ಗೆ ಸಮಜಾಯಿಸಿ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೆ "ಬಿಟ್ ಕಾಯಿನ್ '' ಹಗರಣದ ದೂರು ಪ್ರಧಾನಿ ಕಚೇರಿ ತಲುಪಿದ್ದು ಬೊಮ್ಮಾಯಿ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ.
ಬಡವರ ಜನ್ ಧನ್ ಖಾತೆಗಳು ಸೇರಿದಂತೆ ಅಂತಾರಾಷ್ಟ್ರೀಯ ಬ್ಯಾಂಕುಗಳ ಖ್ಯಾತೆ ಹ್ಯಾಕ್ ಮಾಡಿದ ಅಪರಾಧವೂ ಇದರಲ್ಲಿ ಸೇರಿರುವುದರಿಂದ ದೇಶದ ಗೌರವಕ್ಕೆ ಧಕ್ಕೆಯುಂಟಾಗಿದೆ. ಪ್ರಕರಣದ ಗಂಭೀರತೆ ಅರಿತಿರುವ ಪ್ರಧಾನಿ ಕಚೇರಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಹ ಬೊಮ್ಮಾಯಿ ಸರಕಾರಕ್ಕೆ ಸಲಹೆ ನೀಡಿರುವುದು ಹಗರಣ ನಡೆದಿದೆ ಎಂಬುದಕ್ಕೆ ಇಂಬು ಕೊಟ್ಟಂತಾಗಿದೆ.
ದುರಂತವೆಂದರೆ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಜನ್ ಧನ್ ಯೋಜನೆ ಅಡಿಯ ಸುಮಾರು 80 ಲಕ್ಷ ಖಾತೆಗಳನ್ನು ಸಹ ಹ್ಯಾಕ್ ಮಾಡಲಾಗಿದೆ. ಕೆಲವೆ ಕೆಲವು ಭ್ರಷ್ಟ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು, ಹಗರಣದ ರೂವಾರಿ ಶ್ರೀಕಿ ಯುಕೆಪಿ ಹಾಗೂ ಇತರೆ ನೀರಾವರಿ ಯೋಜನೆಗಳ ಇ - ಟೆಂಡರ್ ಪೋರ್ಟಲ್ ಗಳನ್ನು ಸಹ ಹ್ಯಾಕ್ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವಾಸನೆ ಹತ್ತುತ್ತಲೇ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ರಾಜ್ಯದಲ್ಲಿ ಅನೇಕ ಗುತ್ತಿಗೆದಾರರ ಮನೆ, ಕಚೇರಿಗಳ ದಾಳಿ ನಡೆಸಿ ನೂರಾರು ಕೋಟಿ ರೂ ವಶಪಡಿಸಿಕೊಂಡಿದೆ ಎನ್ನಲಾಗಿದೆ. ಆದರೆ ಐಟಿ ಇಲಾಖೆ ಈವರೆಗೂ ಅದನ್ನು ದೃಢಪಡಿಸಿಲ್ಲ.
ಶ್ರೀಕಿಯೊಂದಿಗೆ ಒಡನಾಟ ಹೊಂದಿರುವ ರಾಜ್ಯ ಕೆಲವು ಪ್ರತಿಷ್ಠಿತ, ಪ್ರಭಾವಿ ರಾಜಕಾರಣಿಗಳು ತಮ್ಮ ಕಪ್ಪು ಹಣವನ್ನು ಇದೇ ಬಿಟ್ ಕಾಯಿನ್ ಧಂದೆ ಮೂಲಕ ಮಾರಿಶಸ್ ಗೆ ರವಾನಿಸಿದ್ದಾರೆ ಎಂದೂ ಶಂಕಿಸಲಾಗುತ್ತಿದೆ.
ಈ ಬೆಳವಣಿಗೆಯಿಂದಾಗಿ ಮುಜುಗರ ಅನುಭವಿಸುತ್ತಿರುವ ಬಿಜೆಪಿ ಹೈಕಮಾಂಡ್ ರಾಜ್ಯದ ನಾಯಕತ್ವ ಬದಲಾಯಿಸಲೂ ಸಹ ಚಿಂತನೆ ನಡೆಸಿದೆ ಎಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿ ಬರುತ್ತಿದೆ. ಅದು ಮುಖ್ಯಮಂತ್ರಿಯೋ ಅಥವಾ ಇನ್ನಾರೋ ಎಂಬುದು ನಿಗೂಢ. ರಾಜ್ಯ ವಿಧಾನಸಭಾ ಚುನಾವಣೆ ಬರುತ್ತಿರುವಾಗ ವಿರೋಧಿಗಳಿಗೆ ಬಿಟ್ ಕಾಯಿನ್ ಅಸ್ತ್ರ ನೀಡುವುದು ಬೇಡ ಎಂಬುದು ವರಿಷ್ಠರ ನಿರ್ಧರಿಸಿರಬಹುದು.
ಈಗಾಗಲೆ ಬೊಮ್ಮಾಯಿ ಸರಕಾರದ ವಿರುದ್ಧ ರಣಕಹಳೆ ಊದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಜಾರಿ ನಿರ್ದೇಶನಾಯಲಕ್ಕೆ ಸಲ್ಲಿಸಿರುವ ಎಲ್ಲ ದಾಖಲೆಗಳನ್ನು ಬಹಿರಂಗಗೊಳಿಸುವಂತೆ ಸಿ.ಎಂ ಬೊಮ್ಮಾಯಿಯನ್ನು ಒತ್ತಾಯಿಸಿದ್ದಾರೆ.
ಏತನ್ಮಧ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ಸಂಗ್ರಹಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬಿಜೆಪಿ ಅನೇಕ ಪ್ರಮುಖ ನಾಯಕರ ವಿರುದ್ಧ ಸ್ಫೋಟಕ ಆಪಾದನೆಗಳನ್ನು ಮಾಡಲು ಸಜ್ಜಾಗಿದ್ದಾರೆ.
ಬೊಮ್ಮಾಯಿಯವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ವಿಚಾರವನ್ನು ಮುಚ್ಚಿಟ್ಟಿದ್ದು, ಇಂಟರ್ ಪೋಲ್ ಹಾಗೂ ಅಂತರಾಷ್ಟ್ರೀಯ ತನಿಖಾ ಸಂಸ್ಥೆಗೆ ವಿಷಯವನ್ನು ತಿಳಿಸದೇ ಇರುವುದು, ಬಿಟ್ ಕಾಯಿನ್ ದಂಧೆಯಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಭಾಗಿಯಾಗಿರುವದನ್ನು ಖಚಿತಪಡಿಸಿದೆ.
ಈ ಹಗರಣದ ಆರೋಪಿ 5000 ಬಿಟ್ ಕಾಯಿನ್ ಗಳನ್ನು ದೋಚಿದ್ದು, ಅದರ ಮೊತ್ತ ಸುಮಾರು 2,283 ಕೋಟಿ ರೂ.ಗಳೆಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ. ಆದರೆ, ಈ ಬಿಟ್‌ಕಾಯಿನ್ ಗಳನ್ನು ಆರೋಪಿಯಿಂದ ಇದನ್ನು ಜಪ್ತಿ ಮಾಡಲಾಗಿದೆಯೇ? ಮಾಡಿದ್ದರೆ, ವಶಪಡಿಸಿಕೊಂಡಿರುವ ಬಿಟ್‌ಕಾಯಿನ್ ಸ್ವತ್ತು ಯಾರ ಬಳಿ ಇದೆ? ಎಂಬುದನ್ನು ಸರ್ಕಾರ ಈವರೆಗೂ ಬಹಿರಂಗಪಡಿಸಿಲ್ಲ.
ಈ ಪ್ರಕರಣದ ತನಿಖೆಯ ವಿಚಾರವಾಗಿಯೂ ಗೃಹಸಚಿವರು ಹಾಗೂ ಮುಖ್ಯಮಂತ್ರಿಗಳು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿಸ್ಸಂಶಯವಾಗಿ ಈ ಬಹುಕೋಟಿ ಹಗರಣದಲ್ಲಿ ಕಾಣದ ಕೈಗಳು ಅಡಗಿರುವುದು ಖಾತರಿಯಾಗಿದೆ. ರಾಜ್ಯ ಸರ್ಕಾರವು ಬಿಟ್‌ಕಾಯಿನ್ ಹಗರಣದ ಕುರಿತು ಕೂಡಲೇ ಸ್ಪಷ್ಟನೆ ನೀಡಬೇಕೆಂದೂ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.
ಏನಿದು ಬಿಟ್ ಕಾಯಿನ್ ?
ಬಿಟ್ ಕಾಯಿನ್ ಡಿಜಿಟಲ್ ಕರೆನ್ಸಿ. ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿರುತ್ತದೆ. ರೂಪಾಯಿ, ಡಾಲರ್, ಯುರೋಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಚಲಾವಣೆಗೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ. ಬಿಟ್ ಕಾಯಿನ್ ವಿಶ್ವದ ಯಾವುದೇ ಮೂಲೆಯಿಂದ ಕೆಲವೇ ನಿಮಿಷಗಳಲ್ಲಿ ಕಳಿಸಲು ಅಥವಾ ಪಡೆಯಲು ಬಳಸಬಹುದು. ಉತ್ಪನ್ನ-ಸೇವೆಗಳನ್ನು ಪಡೆಯಲು ಇಲ್ಲವೇ ಷೇರು ಮತ್ತು ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಆದರೆ ಈ ಪ್ರಕ್ರಿಯೆಗಳೆಲ್ಲ ಇಂಟರ್ ನೆಟ್ ಮೂಲಕ ಮಾತ್ರ ನಡೆಯುತ್ತದೆ.
ಡ್ರಗ್ಸ್ / ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಲ್ಲಿ ಬಳಸಲಾಗುತ್ತದೆ. ಯಾರು ಯಾರಿಗೆ ವರ್ಗಾವಣೆ ಮಾಡಿದ್ದಾರೆ ಎಂಬುದು ಗೊತ್ತಾಗುವುದಿಲ್ಲ.
ಭಾರತದಲ್ಲಿ ಬಿಟ್ ಕಾಯಿನ್ ಬಳಕೆ ನಿಷೇಧ. ಆದರೆ ಯಾವುದೆ ವ್ಯಕ್ತಿ ಅಥವಾ ಸಂಸ್ಥೆಯಿಂದ ನಿಯಂತ್ರಿಸಲ್ಪಡುವುದಿಲ್ಲವಾದ್ದರಿಂದ ಇದನ್ನು ನಿಷೇಧ ಮಾಡುವುದಾದರೂ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
PublicNext
06/11/2021 07:02 pm