ಲಕ್ನೋ: ಬಿಜೆಪಿ ಸಂಸದ ವರುಣ್ ಗಾಂಧಿ ಬೆನ್ನಲ್ಲೇ ಮತ್ತೊಬ್ಬ ಬಿಜೆಪಿ ನಾಯಕ ಲಖಿಂಪುರ್ ಹತ್ಯಾಕಾಂಡದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, "ರಾಜಕೀಯ ನಾಯಕರಾಗಿರುವುದು ಎಂದರೆ ಫಾರ್ಚುನರ್ ಕಾರಿನಿಂದ ಯಾರ ಮೇಲಾದರೂ ಹರಿಸುವುದಲ್ಲ" ಎಂದು ಕಿಡಿಕಾರಿದ್ದಾರೆ. ಲಕ್ನೋದಲ್ಲಿ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಅಧಿವೇಶನದಲ್ಲಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಸ್ವತಂತ್ರ ದೇವ್ ಸಿಂಗ್ ಮಾತನಾಡುತ್ತಿದ್ದರು. ಅವರ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
"ಚುನಾವಣೆಗಳನ್ನು ನಡವಳಿಕೆಯ ಆಧಾರದ ಮೇಲೆ ಗೆಲ್ಲಬೇಕು. ರಾಜಕೀಯವು ನಿಮ್ಮ ಸಮಾಜಕ್ಕೆ, ನಿಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವುದಾಗಿದೆ. ಇದರಲ್ಲಿ ಯಾವುದೇ ಜಾತಿ ಮತ್ತು ಧರ್ಮವಿಲ್ಲ. ರಾಜಕೀಯ ನಾಯಕರಾಗುವುದೆಂದರೆ ಲೂಟಿ ಮಾಡುವುದಲ್ಲ ಹಾಗೂ ಫಾರ್ಚೂನರ್‌ನಿಂದ ಯಾರನ್ನಾದರೂ ಅಡಿಗೆ ಹಾಕುವುದಲ್ಲ. ನಾವು ಬಡವರ ಸೇವೆಗಾಗಿ ಪಕ್ಷದಲ್ಲಿ ಈ ಇದ್ದೇವೆ. ರಾಜಕೀಯವೆಂದರೆ ಅರೆಕಾಲಿಕ ಕೆಲಸವಲ್ಲ" ಎಂದು ಸ್ವತಂತ್ರ ದೇವ್ ಸಿಂಗ್ ಹೇಳಿದ್ದಾರೆ.
ಹತ್ಯಾಕಾಂಡದಲ್ಲಿ ರೈತರ ಪರವಾಗಿ ಧ್ವನಿ ಎತ್ತಿದ್ದ ವರುಣ್ ಗಾಂಧಿ ಅವರನ್ನು ಪಕ್ಷವು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಹೊರಕಾಕಿತ್ತು. ಅದಾಗಿಯೂ ಸ್ವತಂತ್ರ ದೇವ್ ಸಿಂಗ್ ಲಿಖಿಂಪುರ್ ಘಟನೆ ಬಗ್ಗೆ ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ.
PublicNext
11/10/2021 05:22 pm