ವಿಶೇಷ ಸಂಪಾದಕೀಯ : ಕೇಶವ ನಾಡಕರ್ಣಿ
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ವಿರುದ್ಧ ಆಡಿದ ಮಾತುಗಳು, ಮಾಡಿದ ಆಪಾದನೆಗಳು, ವ್ಯಕ್ತಪಡಿಸಿದ ಅಭಿಪ್ರಾಯ ಕಳೆದ ಕೆಲ ದಿನಗಳಿಂದ ಭಾರಿ ಚರ್ಚೆಗೊಳಗಾಗಿದೆ.
ಮೋದಿ ಆರ್ಎಸ್ಎಸ್ ಕೈಗೊಂಬೆ, ಶೈಕ್ಷಣಿಕ ಸೇರಿದಂತೆ ಪ್ರತಿಯೊಂದು ಕ್ಷೇತ್ರ ಕೇಸರೀಕರಣವಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಐಎಎಸ್ ಹುದ್ದೆ ಅಲಂಕರಿಸಿದವರಲ್ಲಿ ಸುಮಾರು 4000 ಅಧಿಕಾರಿಗಳು ಆರ್ಎಸ್ಎಸ್ ಮೂಲದವರು ಎಂದು ಪೂರ್ವಾಗ್ರಹ ಪೀಡಿತರಾಗಿ ಅರ್ಥವಿಲ್ಲದ ವಾದ ಮಂಡಿಸಿದ್ದಾರೆ.
ಐಎಎಸ್, ಐಪಿಎಎಸ್, ಐಆರ್ಎಸ್, ಐಎಫ್ಎಸ್ ದಂತಹ ಉನ್ನತ ಹುದ್ದೆಗಳ ನೇಮಕ ಪ್ರಕ್ರಿಯೆ, ಯುಪಿಎಸ್ಸಿ ವ್ಯವಸ್ಥೆ ಬಗ್ಗೆ ಕನಿಷ್ಟ ಜ್ಞಾನವೂ ಇಲ್ಲದ ಅಜ್ಞಾನಿ ಎಂದು ಮಾಜಿ ಮುಖ್ಯಮಂತ್ರಿ ಸಾಬೀತು ಪಡಿಸಿದ್ದಾರೆ.
ಬಿಜೆಪಿ ಶಾಸಕರು, ಮಂತ್ರಿಗಳು ಹಾಗೂ ಸಂಘ ಪರಿವಾರ ಮುಗಿಬಿದ್ದ ಮೇಲೆ " ಅಯ್ಯಯೋ ಅವು ನನ್ನ ಮಾತುಗಳಲ್ಲ, ಪುಸ್ತಕವೊಂದರಲ್ಲಿ ಬರೆದದ್ದನು ಪ್ರಸ್ತಾಪಿಸಿದ್ದೇನಷ್ಟೇ'' ಎಂದು ಜಾರಿಕೊಳ್ಳಲು ಯತ್ನಿಸಿದ್ದಾರೆ. ಕುಮಾರಣ್ಣ ಓದಿದ ಪುಸ್ತಕ, ಸಂಘ ಪರಿವಾರದ ವಿಚಾರಧಾರೆಗಳನ್ನು ಒಪ್ಪದ ಎಡಪಂಥೀಯ ಧೋರಣೆಯ ಪುಸ್ತಕ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಈ ಹಿಂದೆ ಮೈಸೂರಿನ ಚುನಾವಣಾ ಪ್ರಚಾರದಲ್ಲಿ ಮಾಜಿ ಪ್ರಧಾನಿ, ನಿಮ್ಮ ತಂದೆ ದೇವೇಗೌಡರು ಆರ್ಎಸ್ಎಸ್ ನ್ನು ಪ್ರಶಂಸಿಸಿ ಮಾತನಾಡಿದ್ದನ್ನು ವಿಜಯೇಂದ್ರ ಯಡಿಯೂರಪ್ಪ, ದಾಖಲೆಯೊಂದಿಗೆ ಟ್ವೀಟ್ ಮಾಡಿ ಕುಮಾರಸ್ವಾಮಿಗೆ ನೆನಪಿಸಿದ್ದಾರೆ.
'' ತುರ್ತು ಪರಿಸ್ಥಿತಿಯಲ್ಲಿ ಎಲ್.ಕೆ ಅಡ್ವಾಣಿ ಸೇರಿದಂತೆ ಅನೇಕ ಆರ್ಎಸ್ಎಸ್ ಮುಂಡರು ತಮ್ಮೊಂದಿಗೆ ತಮ್ಮೊಂದಿಗೆ ಜೈಲಿನಲ್ಲಿದ್ದರು. ಆ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿ ನನಗೆ ಮೆಚ್ಚುಗೆಯಾಯಿತು. ಈ ಕಾರಣಕ್ಕಾಗಿಯೇ ನಾನು ಆರ್ಎಸ್ಎಸ್ ಹೊಗಳುತ್ತೇನೆ'' ಎಂದು ಬಹಿರಂಗವಾಗಿ ದೊಡ್ಡ ಗೌಡರು ಭಾಷಣ ಮಾಡಿದ್ದರು.
ತಮಗೆ ಲಾಭವಾಗುವುದಾರೆ ಊಸರವಳ್ಳಿಯನ್ನೂ ನಾಚಿಸುವಂತೆ, ಸಂದರ್ಭಕ್ಕೆ ತಕ್ಕ ಹಾಗೆ ಬದಲಾಗುವುದರಲ್ಲಿ ಗೌಡರ ಕುಟುಂಬ ನಿಸ್ಸೀಮ. ಆ ಸಮಯದಲ್ಲಿ ಗೌಡರಿಗೆ ಬಹುಶಃ ಬಿಜೆಪಿ ಅಥವಾ ಸಂಘ ಪರಿವಾರದಿಂದ ಎನೋ ಲಾಭವಾಗ ಬೇಕಾಗಿರಬಹುದು. ಯಾವುದೆ ರಾಜಕೀಯ ಲಾಭವಿಲ್ಲದೆ ಗೌಡರಾಗಲಿ, ಪುತ್ರದ್ವಯರಾಗಲಿ ಯಾರನ್ನೂ ಹೊಗಳುವುದಿಲ್ಲ ಅಥವಾ ತೆಗಳುವುದಿಲ್ಲ.
ಈಗ ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಸ್ಲಿಂ ಸಮುದಾಯವನ್ನು ಓಲೈಸಬೇಕಾಗಿದೆ. ಹೀಗಾಗಿ ಪ್ರಚಾರ ಭಾಷಣವಿರಬಹುದು, ಪತ್ರಿಕಾ ಗೋಷ್ಠಿಗಳಿರಬಹುದು ಕಾಂಗ್ರೆಸ್ ನಾಯಕರು ಎಂದಿನಂತೆ ಬಿಜೆಪಿ ಕೊಲೆಗಡಕ ಸರಕಾರ, ರೈತ ವಿರೋಧಿ ಜನವಿರೋಧಿ ಎಂದು ಟೀಕಿಸ ತೊಡಗಿದ್ದಾರೆ.
ಅದನ್ನೇ ಮಾಡಿದರೆ ಜೆಡಿಎಸ್ ಬಗ್ಗೆ ಯಾರೂ ಕ್ಯಾರೆ ಎನ್ನುವುದಿಲ್ಲ. ಬದಲಾಗಿ ಬಿಜೆಪಿ ಆತ್ಮವಾಗಿರುವ ಆರ್ಎಸ್ಎಸ್ ನ್ನೇ ಹಿಗ್ಗಾಮುಗ್ಗಾ ಟೀಕಿಸಿದರೆ ತಮಗೆ ಲಾಭವಾದೀತು ಎಂದು ಎಚ್ಡಿಕೆ ಭಾವಿಸಿ ಈ ಮಾತುಗಳನ್ನು ಆಡಿರಬಹುದು. ಆದರೆ ಅದರ ಪರಿಣಾಮ ಏನಾಗುತ್ತೆ ಎಂಬುದು ನಂತರ ಇವರಿಗೆ ಅರಿವಾಗುತ್ತೆ.
ಬಲಪಂಥೀಯ ಧೋರಣೆಯ ಆರ್ಎಸ್ಎಸ್ ನ್ನು ಅನೇಕ ದಶಕಗಳಿಂದ ಟೀಕಿಸಲಾಗುತ್ತಿದೆ. ಸಂಘ ಪರಿವಾರವನ್ನು ಕಟುವಾಗಿ ಟೀಕಿಸುವವರಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯಸಿಂಗ್ ಅಗ್ರಗಣ್ಯರು. ಮೋದಿಯನ್ನು ಟೀಕಿಸುವ ಅವಾಕಾಶ ಬಂದಾಗಲೆಲ್ಲ ಸಿಂಗ್ ಆರ್ಎಸ್ಎಸ್ ನ್ನು ಹಿಗ್ಗಾಮುಗ್ಗಾ ಟೀಕಿಸಿ ತಮ್ಮ ಬಾಯಿ ಚಪಲ ತೀರಿಸಿಕೊಳ್ಳುತ್ತಾರೆ.
ಆದರೆ ಅವರೂ ಸಹ ಸಂಘದ ಸೇವಾ ಮನೋಭಾವನೆ ಹಾಗೂ ಸ್ವಯಂ ಸೇವಕರ ಕಾರ್ಯವನ್ನು ಮುಕ್ತವಾಗಿ ಪ್ರಶಂಸಿಸಿದ ಉದಾಹರಣೆ ಉಂಟು. ಸಿಂಗ್ ಬಿಜೆಪಿ ಕಟ್ಟಾ ವಿರೋಧಿ ಇರಬಹುದು. ಗುಣಕ್ಕೆ ಮತ್ಸರವಿರಬಾರದು ಎಂಬಂತೆ ಸಂಘದ ಸೇವಾ ಗುಣಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡುವಲ್ಲಿಯೂ ಹಿಂದೆ ಬಿದ್ದಿಲ್ಲ.
ಸಿಂಗ್ ಪವಿತ್ರ " ನರ್ಮದಾ ಪರಿಕ್ರಮ್ '' ಪಾದಯಾತ್ರೆ ಕೈಗೊಂಡಿದ್ದರು. ಒಂದು ದಿನ ರಾತ್ರಿ ಅವರ ತಂಡ ಗುಜರಾತಿನ ಗುಡ್ಡ ಬೆಟ್ಟಗಳ ಕಡಿದಾದ ಮಾರ್ಗ ಮಧ್ಯ ತಂಗ ಬೇಕಾಯಿತು. ಅದು ಅರಣ್ಯ ಪ್ರದೇಶವಾಗಿದ್ದರಿಂದ ಯಾವುದೇ ಸೌಲಭ್ಯಗಳು ಇರಲಿಲ್ಲ.ಆ ಸಮಯದಲ್ಲಿ ಅರಣ್ಯಾಧಿಕಾರಿಯೊಬ್ಬರು ಬಂದು ಸಿಂಗ್ ತಂಡದ ಕ್ಷೇಮ ಸಮಾಚಾರ ವಿಚಾರಿಸಿದರಲ್ಲದೆ ಅವರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಿದರು.
ಆಗ ಸಿಂಗ್ "ನಿಮಗೆ ಹೇಗೆ ಗೊತ್ತಾಯಿತು ನಾವಿಲ್ಲಿ ಬಂದುದು, ಈ ಎಲ್ಲ ವ್ಯವಸ್ಥೆ ಏಕೆ ಮಾಡುತ್ತಿದ್ದೀರಿ'' ಎಂದು ಕೇಳಿದಾಗ, " ನಿಮಗೆ ಯಾವುದೆ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಬೇಕೆಂದು ಗೃಹ ಸಚಿವ ಅಮಿತ್ ಶಾ ಅವರಿಂದ ಆದೇಶವಾಗಿದೆ. ಎಂದು ಅಧಿಕಾರಿ ಹೇಳಿದರಂತೆ. ಅದೇ ಸಮಯದಲ್ಲಿ ಆರ್ಎಸ್ಎಸ್ ಕಾರ್ಯಕರ್ತರ ತಂಡವೊಂದು ನಮ್ಮ ಸೇವೆ ನಿಂತಿತು. ಅಷ್ಟೇ ಅಲ್ಲ ಅರಣ್ಯ ಮಾರ್ಗವಾಗಿ ನಾವು ಹೋಗುವ ದಾರಿಯುದ್ದಕ್ಕೂ ಆರ್ಎಸ್ಎಸ್ ಸ್ವಯಂ ಸೇವಕರು ನಮ್ಮ ಬೆಂಗಾವಲಾಗಿ ಬಂದರು. ಅವರ ಸೇವಾ ಮನೋಭಾಗ ಕಾಯಕ ನಿಷ್ಠೆ ನನ್ನನ್ನು ಮಂತ್ರಮುಗ್ಧನನ್ನಾಗಿ ಮಾಡಿಸಿತು'' ಎಂದು ದಿಗ್ವಿಜಯಸಂಗ್ ಬಣ್ಣಿಸಿದ್ದರು.
ಕೆಲವು ರಾಜಕೀಯ ಪಕ್ಷಗಳು, ಚಲನ ಚಿತ್ರ ನಟರು, ಸಾಹಿತಿಗಳು ಕಾಲ ಕಾಲಕ್ಕೆ ಆರ್ಎಸ್ಎಸ್ ನ್ನು ಟೀಕಿಸುತ್ತಲೆ ಬಂದಿದ್ದಾರೆ. ಇತ್ತೀಚೆಗೆ ಖ್ಯಾತ ಚಿತ್ರ ಸಾಹಿತಿ ಜಾವೇದ್ ಅಖ್ತರ್ ಅಂತೂ ಆರ್ಎಸ್ಎಸ್ ನ್ನು ತಾಲಿಬಾನಿಗಳಿಗೆ ಹೋಲಿಸಿದ್ದಾರೆ ಬಾಯಿಗೆ ಬಂದಂತೆ ಮಾತನಾಡಿ ಈಗ ಕಾನೂನಿನ ಕ್ರಮ ಎದುರಿಸುತ್ತಿದ್ದಾರೆ.
ಆರ್ಎಸ್ಎಸ್ ಎಂದೂ ಯಾವುದೇ ಟೀಕೆ ಟಿಪ್ಪಣಿ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಆರೋಪಗಳಿಗೆ ಕುಗ್ಗುವುದಿಲ್ಲ ಹೊಗಳಿಕೆ ಹಿಗ್ಗುವುದಿಲ್ಲ. ತನ್ನ ವಿಚಾರಧಾರಗಳಿಗೆ ಅನುಗುಣವಾಗಿ ಸೇವಾ ಮನೋಭಾವದಿಂದ ಮುನ್ನಡೆದಿದೆ, ನಿರಂತವಾಗಿ ಮುನ್ನಡೆಯಲಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ.
PublicNext
08/10/2021 04:17 pm