ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನೈಟ್ ಪಾಲಿಟಿಕ್ಸ್ ಚೆನ್ನಾಗಿ ಗೊತ್ತು. ರಾತ್ರಿ ರಾಜಕಾರಣ ಮಾಡಿ ಅವರು ಶಾಸಕಿಯಾಗಿದ್ದು ಎಂದು ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆಗಳು ಹಾಳಾಗಿದ್ದವು. ಈ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವಿನ ಆರೋಪ-ಪ್ರತ್ಯಾರೋಪದ ವೇಳೆ ಸಂಜಯ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. "ಬಿಜೆಪಿಯವರಿಗೆ ನೈಟ್ ಪಾಲಿಟಿಕ್ಸ್ ಮಾಡಿ ಗೊತ್ತಿಲ್ಲ. ಕಾಂಗ್ರೆಸನವರು ರಾತ್ರಿ ರಾಜಕೀಯ ಮಾಡ್ತಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ನೈಟ್ ಪಾಲಿಟಿಕ್ಸ್ ಚೆನ್ನಾಗಿ ಗೊತ್ತು. ಹೀಗಾಗಿ ನೈಟ್ ಪಾಲಿಟಿಕ್ಸ್ ಮಾಡಿ ಗೆದ್ದು ಬಂದಿದ್ದಾರೆ" ಎಂದು ಸಂಜಯ್ ಪಾಟೀಲ್ ವ್ಯಂಗ್ಯವಾಡಿದ್ದಾರೆ.
'ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸತ್ಯವನ್ನು ಎದುರಿಸುವ ಶಕ್ತಿ ಇಲ್ಲ. ಶಾಸಕಿಯಾಗುವ ಮುನ್ನ ನಾನು ನಿಮ್ಮ ಮನೆ ಮಗಳು ಎಂದು ಜನರಿಗೆ ಹೇಳಿದ್ದರು. ಆದರೆ ಗೆದ್ದು ಬಂದ ಬಳಿಕ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರು ಮಾಡಿರುವ ಕೆಲಸಕ್ಕೆ ಜನರೇ ಉತ್ತರ ನೀಡುತ್ತಾರೆ. ಜನರು ಟೀಕೆ ಮಾಡುವುದನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಬಿಜೆಪಿ ಮೇಲೆ ಕಿಡಿಕಾರುತ್ತಿದ್ದಾರೆ. ತಮ್ಮನ್ನು ಅವರು ಡೆವಲಪ್‌ಮೆಂಟ್ ರಾಣಿ, ಮಹಾರಾಣಿ ಎಂದು ಏನು ಬೇಕಾದರೂ ಕರೆದುಕೊಳ್ಳಲಿ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರಿಗೆ ಟೀಕೆ ಸಹಿಸಿಕೊಳ್ಳುವ ಶಕ್ತಿಯನ್ನು ದೇವರ ಹತ್ತಿರ ಬೇಡಿ ಪಡೆದುಕೊಳ್ಳಬೇಕು' ಎಂದು ವಾಗ್ದಾಳಿ ನಡೆಸಿದರು.
PublicNext
30/09/2021 03:37 pm