ಲಕ್ನೋ : ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರವಿವಾರ ಸಂಜೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂಪುಟ ವಿಸ್ತರಣೆ ಮಾಡಿದ್ದಾರೆ. ಈ ವೇಳೆ ಏಳು ಹೊಸ ಸಚಿವರು ಯೋಗಿ ಬಳಗ ಸೇರಿಸಿದ್ದಾರೆ. ಜತಿನ್ ಪ್ರಸಾದ, ಛತ್ರಪಾಲ್ ಸಿಂಗ್ ಗಂಗ್ವಾರ್, ಪಾಲ್ತು ರಾಮ್, ಸಂಗೀತಾ ಬಲವಂತ್, ಸಂಜೀವ್ ಕುಮಾರ್, ದಿನೇಶ್ ಖಾತಿಕ್ ಮತ್ತು ಧರ್ಮವೀರ್ ಸಿಂಗ್ ಅವರನ್ನು ರಾಜ್ಯ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು.
ಈ ಮೂಲಕ ಉತ್ತರಪ್ರದೇಶದಲ್ಲಿ ಸಚಿವರ ಸಂಖ್ಯೆ 60ಕ್ಕೆ ಏರಿದೆ. ಪಕ್ಷದಲ್ಲಿ ಸಮುದಾಯದ ಪ್ರಾತಿನಿಧ್ಯದ ಬಗ್ಗೆ ಅದರ ಆಂತರಿಕ ಚಿಂತೆಗಳ ನಡುವೆ ಬ್ರಾಹ್ಮಣ ನಾಯಕ ಜಿತಿನ್ ಪ್ರಸಾದ ಅವರನ್ನು ಈ ವರ್ಷದ ಆರಂಭದಲ್ಲಿ ಬಿಜೆಪಿಗೆ ಸೇರಿಸಲಾಯಿತು. ಪ್ರಸಾದ ಅವರನ್ನು ಕ್ಯಾಬಿನೆಟ್ ಸಚಿವರಾಗಿ ಸೇರಿಸಿಕೊಂಡಿದ್ದು ಉಳಿದ ಆರು ಮಂದಿ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಮುಂದಿನ ವರ್ಷದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಹೋರಾಟ ನಡೆಸಲಿದ್ದು ಫೆಬ್ರವರಿಯಲ್ಲಿ ಸಿಎಂ ಆದಿತ್ಯನಾಥ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ, 403 ಸ್ಥಾನಗಳಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಅದರ ಮಿತ್ರ ಪಕ್ಷ ಅಪ್ನಾ ದಳ (ಸೋನೆಲಾಲ್) ಒಂಬತ್ತು ಸ್ಥಾನಗಳನ್ನು ಗೆದ್ದಿತ್ತು.
PublicNext
26/09/2021 08:49 pm