ನವದೆಹಲಿ: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಮೂಲಕ ಕಳೆದ ಆರು ತಿಂಗಳಲ್ಲಿ ಬಿಜೆಪಿಯು ಅಧಿಕಾರದಿಂದ ಕೆಳಗಿಳಿಸಿದ ನಾಲ್ಕನೇ ಮುಖ್ಯಮಂತ್ರಿ ವಿಜಯ್ ರೂಪಾನಿ ಎನಿಸಿಕೊಂಡಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗಲೇ ಮುಖ್ಯಮಂತ್ರಿ ಬದಲಾವಣೆ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೇವಲ ಗುಜರಾತ್ ಮಾತ್ರವಲ್ಲದೆ ಕಳೆದ ಆರು ತಿಂಗಳಲ್ಲಿ ಮೂರು ರಾಜ್ಯದಲ್ಲಿ ನಾಲ್ವರು ಸಿಎಂಗಳನ್ನು ಬಿಜಿಪಿ ಹೈಕಮಾಂಡ್ ಬದಲಾವಣೆ ಮಾಡಿದೆ.
ಮೊದಲಿಗೆ ಉತ್ತರಾಖಂಡದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನಂತರ ಸಿಎಂ ಆದ ತೀರ್ಥ್ ಸಿಂಗ್ ರಾವತ್ ನಾಲ್ಕೇ ತಿಂಗಳಿಗೆ ರಾಜೀನಾಮೆ ನೀಡಿದರು, ಸದ್ಯ ಪುಷ್ಕರ ಸಿಂಗ್ ಧಾಮಿನಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಬಸವರಾಜ್ ಬೊಮ್ಮಾಯಿ ಅವರಿಗೆ ಅಧಿಕಾರ ನೀಡಿದರು. ಇದೀಗ ಗುಜರಾತ್‌ನಲ್ಲಿಯೂ ಇದೇ ಸೂತ್ರ ಅನುಸರಿಸಿದ್ದು, ರೂಪಾಣಿಗೆ ಕೊಕ್ ಕೊಟ್ಟು ಮತ್ತೊಬ್ಬರಿಗೆ ಅಧಿಕಾರದ ಹೊಣೆ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಉತ್ತರಾಖಂಡದಲ್ಲಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನಂತರ ಸಿಎಂ ಆದ ತೀರ್ಥ್ ಸಿಂಗ್ ರಾವತ್ ನಾಲ್ಕೇ ತಿಂಗಳಿಗೆ ರಾಜೀನಾಮೆ ನೀಡಿದರು. ಬಿಎಸ್ ಯಡಿಯೂರಪ್ಪ ಕಣ್ಣೀರಿಡುತ್ತಾ ರಾಜೀನಾಮೆ ನೀಡಿದರು, ಕಾರಣ ಇನ್ನೂ ನಿಗೂಢ! ಈಗ ಗುಜರಾತ್ ಸಿಎಂ ವಿಜಯ್ ರೂಪಾನಿ ಏಕಾಏಕಿ ರಾಜೀನಾಮೆ. ಈ ರಾಜೀನಾಮೆಗಳು ದೇಶಾದ್ಯಂತ ಬಿಜೆಪಿಗೆ ಜನವಿರೋಧ ಎದುರಾಗಿರುವ ದ್ಯೋತಕ' ಎಂದು ಕುಟುಕಿದೆ.
PublicNext
12/09/2021 08:11 am