ಮೈಸೂರು: ಜಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಕುರಿತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸುಳಿವು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, 'ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಇತ್ತೀಚೆಗೆ ಭೇಟಿಯಾಗಿ ಪಕ್ಷ ತೊರೆಯುವ ಬಗ್ಗೆ ತಿಳಿಸಿದ್ದೇನೆ. ಆದರೆ ಅವರು ತಮ್ಮ ಜೊತೆಗೆ ಇರಲು ಕೋರಿದರು. ಆಗದು ಎಂದು ಕ್ಷಮೆ ಕೋರಿದೆ. ಈಗಾಗಲೇ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿರುವುದಾಗಿಯೂ ದೇವೇಗೌಡರಿಗೆ ತಿಳಿಸಿದೆ' ಎಂದು ಹೇಳಿದ್ದಾರೆ.
'ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹುಣಸೂರು ಕ್ಷೇತ್ರದಿಂದ ನನ್ನ ಮಗ ಹರೀಶ್‌ಗೌಡನಿಗೆ ಜೆಡಿಎಸ್ ಟಿಕೆಟ್ ನೀಡಲಿಲ್ಲ. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಆತ ಭೇಟಿ ಮಾಡಿದಾಗ ಎಚ್.ಡಿ.ಕುಮಾರಸ್ವಾಮಿ ಸರಿಯಾಗಿ ಸ್ಪಂದಿಸಲಿಲ್ಲ. ಪಾಲಿಕೆ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ನನ್ನೊಂದಿಗೆ ಆಡಿದ ಮಾತುಗಳನ್ನು ಹೇಳಲಾರೆ. ಪ್ರತಿ ಹಂತದಲ್ಲೂ ನನಗೆ ಅವಮಾನವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಬಿಜೆಪಿ ಕಡೆಗೆ ಹೋಗಬೇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಸೇರಿದರೆ ನಾನು ಹಾಗೂ ನನ್ನ ಮಗ ಜಿ.ಡಿ.ಹರೀಶ್‌ಗೌಡರಿಗೆ ಟಿಕೆಟ್ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದೇನೆ. ನಾನು ಪಕ್ಷಕ್ಕೆ ಸೇರಿದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಾವು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಕೂಡಾ ಹೇಳಿದ್ದಾರೆ’ ಎಂದರು.
PublicNext
25/08/2021 10:07 am