ಬೆಂಗಳೂರು: ನಾನೀಗ ನಿತ್ಯವೂ ಬ್ಯಾಡ್ಮಿಂಟನ್ ಆಡುತ್ತಿರುವೆ, ನನಗೂ ಒಳ್ಳೆಯ ಟೈಂ ಬರುತ್ತೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಳಗಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ, ಸೆಕ್ಸ್ ಸಿಡಿ ಕೇಸ್ನಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡರು. ಇದೀಗ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟದಲ್ಲೂ ಇವರಿಗೆ ಸ್ಥಾನ ಸಿಕ್ಕಿಲ್ಲ. ಇವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಅವಕಾಶ ನೀಡಲಾಗುತ್ತೆ ಎನ್ನಲಾಗಿತ್ತಾದರೂ ಕೈಗೂಡಲಿಲ್ಲ. ಈ ಬಾರಿ ಜಾರಕಿಹೊಳಿ ಕುಟುಂಬಕ್ಕೆ ಮಂತ್ರಿ ಪಟ್ಟ ಕೈ ತಪ್ಪಿದ್ದು, ರಮೇಶ್ಗೆ ಭಾರಿ ಮುಖಭಂಗ ಆದಂತಾಗಿದೆ. ಅತ್ತ ಸಿಡಿ ಕೇಸ್ ಸಂಬಂಧ ಬಿ ರಿಪೋರ್ಟ್ ಹಾಕಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.
ಈ ಕುರಿತು ಸುದ್ದಿಗಾರರಿಗೆ ಗುರುವಾರ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ‘ನನಗೂ ಒಳ್ಳೆಯ ಕಾಲ ಬರಲಿದೆ. ನಮ್ಮ ಅಧ್ಯಕ್ಷರನ್ನ ಭೇಟಿಯಾಗಲು ಬಂದಿದ್ದೆ. ನಮ್ಮ ಕ್ಷೇತ್ರದ ಜನರು ನನ್ನೊಟ್ಟಿಗೆ ಇದ್ದಾರೆ. ನಾನೀಗ ಪ್ರತಿ ದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ. ಬಿ ರಿಪೋರ್ಟ್ ಹಾಕೋದು ನನಗೆ ಗೊತ್ತಿಲ್ಲ. ಏನಾಗುತ್ತೋ ಅಂತ ನೋಡೋಣ ಎಂದರು.
PublicNext
05/08/2021 06:44 pm