ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವ ಸ್ಥಾನ ನೀಡದಿದ್ರೆ ಹಿರಿಯೂರು ಬಂದ್, ಬೆಂಗ್ಳೂರಿಗೆ ಪಾದಯಾತ್ರೆ

ಚಿತ್ರದುರ್ಗ : ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಹಿಂದುಳಿದ ವರ್ಗಗಳ ನಾಯಕಿ ಹಾಗೂ ರಾಜ್ಯದ ಗೊಲ್ಲ ಸಮುದಾಯದ ಏಕೈಕ ಶಾಸಕಿಯಾಗಿರುವ ಕೆ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡದಿದ್ದರೆ ಹಿರಿಯೂರು ಬಂದ್ ಮಾಡಿ,ನಂತರ ಹಿರಿಯೂರಿನಿಂದ ಬೆಂಗಳೂರಿಗೆ ಲಕ್ಷಾಂತರ ಕಾರ್ಯಕರ್ತರು ಪಾದಯಾತ್ರೆ ಮಾಡಿ ಬೃಹತ್ ಪ್ರತಿಭಟನೆ ಮಾಡುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ತೋರಿಸುತ್ತವೆ. ಮುಂದಿನ ದಿನಗಳಲ್ಲಿ ಇದು ಬಿಜೆಪಿ ಪಕ್ಷ ತುಂಬಲಾರದ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹಿಂದುಳಿದ ವರ್ಗಗಳ ಮುಖಂಡರು ಸರ್ಕಾರಕ್ಕೆ ಹಾಗೂ ಬಿಜೆಪಿ ವರಿಷ್ಠರಿಗೆ ಖಡಕ್ ಎಚ್ಚರಿಕೆ ನೀಡಿದರು.

ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿರುವ ಲಕ್ಷ್ಮಮ್ಮ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಮಾತಾನಾಡಿದ ನಗರಸಭೆ ಸದಸ್ಯ ಸಣ್ಣಪ್ಪ " ಹಿರಿಯೂರು ಕ್ಷೇತ್ರ ಹಿಂದುಳಿದಿದ್ದು ಅಭಿವೃದ್ಧಿ ದೃಷ್ಟಿಯಿಂದಲಾದರೂ ನಮ್ಮ ಶಾಸಕಿಗೆ ಸಚಿವ ಸ್ಥಾನ ನೀಡಬೇಕಿತ್ತು. ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಹೊಂದಿರುವ ಏಕೈಕ ಮಹಿಳೆಗೆ ಅನ್ಯಾಯ ಮಾಡಲಾಗಿದೆ. ಒಂದು ವಾರದಿಂದ ಎಲ್ಲ ಮಾಧ್ಯಮಗಳಲ್ಲಿ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರು ತೋರಿಸುತ್ತಿದ್ದರು. ಪ್ರಮಾಣ ವಚನ ಸ್ವೀಕಾರ ನೆಡೆಯುವ ಕೆಲವೇ ಕ್ಷಣದಲ್ಲಿ ನಮ್ಮ ನಾಯಕಿಯ ಹೆಸರು ತಿದ್ದಿ, ಕಳಂಕಿತರಿಗೆ, ಅದರಲ್ಲೂ ದೆಹಲಿಯಿಂದ ಬಂದವರಿಗೆ ಝಿರೋ ಟ್ರಾಫಿಕ್ ಮೂಲಕ ಸ್ವಾಗತಿಸಿ ಸ್ಥಾನ ನೀಡಿರುವುದು ಖಂಡನಿಯ ಎಂದರು. ವ್ಯವಸ್ಥಿತ ರೀತಿಯಲ್ಲಿ ಎಲ್ಲ ಸಮಾಜವನ್ನು ಒಗ್ಗೂಡಿಸಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಶಿರಾ ಉಪಚುನಾವಣೆಯ ಗೆಲುವಿಗೆ ಪೂರ್ಣಿಮಾ ಕಾರಣರಾಗಿದ್ದಾರೆ. ಇಂತಹ ಒಂದು ಮಹಿಳೆಗೆ ಅನ್ಯಾಯವಾಗಿದೆ. ಉಳಿದ ನಾಲ್ಕು ಸ್ಥಾನಗಳಲ್ಲಿ ಒಂದು ಸ್ಥಾನ ಇವರಿಗೆ ನೀಡಬೇಕು ಎಂದು ಆಗ್ರಹಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್ ಮಾತನಾಡಿ ತಮಿಳುನಾಡಿನಲ್ಲಿ ಜಯಲಲಿತಾಗೆ ಅಮ್ಮ ಎಂದು ಕರೆಯುತ್ತಿದ್ದರು. ನಾವು ನಮ್ಮ ತಾಲೂಕಿನಲ್ಲಿ ಅಕ್ಕ ಎಂದು ಕರೆಯುತ್ತೇವೆ. ಶಾಸಕ ಸ್ಥಾನಕ್ಕಿಂತ ಅಕ್ಕ ಎನ್ನುವ ಸ್ಥಾನ ದೊಡ್ಡದಿದೆ. ಪ್ರೀತಿ ವಿಶ್ವಾಸದಿಂದ ಕಾಣುವ ಏಕೈಕ ಶಾಸಕಿ ಎಂದರೆ ಅದು ಪೂರ್ಣಿಮಾ ಶ್ರೀನಿವಾಸ್ ಮಾತ್ರ ಎಂದರು. ಹಿಂದೆ ಪೂರ್ಣಿಮಾ ಅವರನ್ನು ಗೆಲ್ಲಿಸಿ ಕೊಂಡು ಬಂದರೆ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿಯ ಅರವಿಂದ ಲಿಂಬಾವಳಿ ಹೇಳಿದ್ದರು.

ಇವತ್ತು ನಮಗೆ ತುಂಬಾ ಅನ್ಯಾಯ ವಾಗಿದೆ. ಇದರ ಜೊತೆಗೆ ಬೋವಿ ಸಮಾಜಕ್ಕೆ ಪದವಿ ತಪ್ಪಿಸಿರುವುದು ಸಹ ತುಂಬಾ ಅನ್ಯಾಯ ಮಾಡಿದಂತಾಗಿದೆ. ರಾಜ್ಯದಲ್ಲಿ ಬೋವಿ ಸಮಾಜ ಸಾಕಷ್ಟು ಸಂಖ್ಯೆಯಲ್ಲಿ ಇದೆ. ನಮ್ಮ ಸಮುದಾಯಕ್ಕೆ ಮೊಸ ಮಾಡಲಾಗಿದೆ ಎಂದರು. ರಾಜ್ಯದಲ್ಲಿ ಗೊಲ್ಲ ಸಮುದಾಯದ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ರಾಜ್ಯದ ಒರ್ವ ಮಹಿಳೆ ಕೋಲಾರದಿಂದ ಬೆಳಗಾವಿಯವರೆಗೆ ತಿರುಗಿ ಪಕ್ಷ ಕಟ್ಟುತ್ತಿದ್ದಾರೆ ಇಂತಹ ಮಹಿಳೆಗೆ ಸಚಿವ ಸ್ಥಾನ ನೀಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಮತ್ತೊಷ್ಟು ಬಲ ಬರುತ್ತದೆ. ಸ್ಥಾನ ನೀಡಲಿಲ್ಲ ಎಂದರೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಹೇಳಿದರು. ಹಿರಿಯೂರು ಬಂದ್ ಗೆ ಕರೆ ನೀಡಿ, ನಂತರ ಲಕ್ಷಾಂತರ ಕಾರ್ಯಕರ್ತರು, ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡು ಬೃಹತ್ ಪ್ರತಿಭಟನೆ ನಡೆಸಿ ನಮ್ಮ ಶಕ್ತಿ ಪ್ರದರ್ಶನ ತೋರಿಸುತ್ತವೆ ಎಂದರು.

ಗುರುವಾರ ( ನಾಳೆ) ಧರ್ಮಪುರ, ಜವಗೊಂಡನಹಳ್ಳಿ, ಐಮಂಗಲ ಹಾಗೂ ಕಸಬಾ ಹೋಬಳಿಯಿಂದ ನಗರಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಮಾಜಿ. ಜಿ.ಪ. ಸದಸ್ಯೆ ರಾಜೇಶ್ವರಿ, ಮಾಜಿ ನಗರಸಭೆ ಸದಸ್ಯ ತಿಮ್ಮಣ್ಣ, ಜಿಲ್ಲಾ ಬಿಜೆಪಿ ಮುಖಂಡ ಮಂಜುನಾಥ್, ಪ್ರಸನ್ನ ಬೆಳಗೆರೆ, ಎಜಿ ತಿಮ್ಮಯ್ಯ, ಪಾಂಡು ಸೇರಿದಂತೆ ಇತರರು ಮಾತನಾಡಿದರು. ಈ ಸಭೆಯಲ್ಲಿ ಮಾಜಿ ತಾ.ಪ. ಸದಸ್ಯ ತಮ್ಮಣ್ಣ, ಕರಿಯಣ್ಣ, ನಗರಸಭೆ ಸದಸ್ಯ ಕುದ್ರು, ಬಾಲಕೃಷ್ಣ, ಮಾಜಿ ನಗರಸಭೆ ಅಧ್ಯಕ್ಷೆ ಟಿ. ಮಂಜುಳಾ, ಶೋಭಾ, ಶಿವಣ್ಣ, ಉಪ್ಪರಾ ಸಮಾಜದ ಅಧ್ಯಕ್ಷ ರಾಮಣ್ಣ, ಸೇರಿದಂತೆ ಹಿಂದುಳಿದ ವರ್ಗಗಳ ಸಮಾಜದ ಮುಖಂಡರು, ಮತ್ತಿತರರು ಭಾಗವಹಿಸಿದ್ದರು.

Edited By : Nirmala Aralikatti
PublicNext

PublicNext

05/08/2021 03:54 pm

Cinque Terre

39.06 K

Cinque Terre

0

ಸಂಬಂಧಿತ ಸುದ್ದಿ