ದಾವಣಗೆರೆ: ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಎಂಬ ಕುತೂಹಲ ಜನರಲ್ಲಿದೆ. ಇನ್ನು ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹಾಗೂ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಟೆಂಪಲ್ ರನ್ ಶುರು ಮಾಡಿದ್ದಾರೆ.
ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಇಬ್ಬರು ನಾಯಕರು ತಮ್ಮ ತಮ್ಮ ಕ್ಷೇತ್ರದಲ್ಲಿ ತಾವು ನಂಬಿರುವಂತ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಜೊತೆಗೆ ಹರಕೆ ಹೊತ್ತುಕೊಳ್ಳುತ್ತಿದ್ದಾರೆ.
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅಮ್ಮನಗುಡ್ಡದಲ್ಲಿರುವ ಕುಕ್ಕುವಾಡೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ನಡೆಸಿದರು. ತಾಯಿ ಸಚಿವ ಸ್ಥಾನ ಕರುಣಿಸು ಎಂದು ಪ್ರಾರ್ಥಿಸಿದರು. ಇನ್ನು ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ರೇಣುಕಾಚಾರ್ಯ ಅವರು ನಿನ್ನೆಯಿಂದಲೇ ಟೆಂಪಲ್ ರನ್ ಮಾಡ್ತಿದ್ದಾರೆ. ಹಳದಮ್ಮ, ಮಾರಿಕಾಂಬ ದೇಗುಲಕ್ಕೆ ಭೇಟಿ ನೀಡಿದ್ದರು.
ಹೊನ್ನಾಳಿ ಪಟ್ಟಣದ ಪ್ರಸಿದ್ಧ ದೇಗುಲ ಶ್ರೀ ಚನ್ನಪ್ಪಸ್ವಾಮಿ ಶ್ರೀಮಠಕ್ಕೆ ಭೇಟಿ ನೀಡಿದರು. ಬೆಳ್ಳಂಬೆಳಿಗ್ಗೆ ದೇಗುಲಕ್ಕೆ ತೆರಳಿದ ರೇಣುಕಾಚಾರ್ಯ ಅವರು ಚನ್ನಪ್ಪಸ್ವಾಮಿಯ ದೇಗುಲದ ಪ್ರವೇಶ ದ್ವಾರದಲ್ಲಿ ಹಣೆ ಇಟ್ಟು ನಮಸ್ಕರಿಸಿದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ದೆಹಲಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂಬ ಬಗ್ಗೆ ಚರ್ಚೆ ನಡೆದು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದರೆ, ಇತ್ತ ರೇಣುಕಾಚಾರ್ಯ ದೇವರ ಮೊರೆ ಹೋಗಿದ್ದಾರೆ. ದೇವರಲ್ಲಿ ಸಚಿವ ಸ್ಥಾನ ಕರುಣಿಸು ಎಂದು ಪ್ರಾರ್ಥಿಸತೊಡಗಿದ್ದಾರೆ. ಮಾರಿಕಾಂಬ, ಹಳದಮ್ಮ ಸೇರಿದಂತೆ ಹಲವು ದೇಗುಲಗಳಿಗೆ ಭೇಟಿ ನೀಡಿ ದೇರವಲ್ಲಿ ಹರಕೆ ಹೊರುತ್ತಿದ್ದಾರೆ. ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ಪಕ್ಕಾ ಎಂದು ಐವರು ಶಾಸಕರು ಹೇಳುತ್ತಿದ್ದಾರೆ. ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ರೇಣುಕಾಚಾರ್ಯ, ಎಸ್. ಎ. ರವೀಂದ್ರನಾಥ್ ಹಾಗೂ ಜಗಳೂರು ಶಾಸಕ ಎಸ್. ವಿ. ರಾಮಚಂದ್ರಪ್ಪ ರೇಸ್ ನಲ್ಲಿದ್ದು, ಯಾರಿಗೆ ಸಚಿವ ಸ್ಥಾನ ಸಿಗುತ್ತೆ ಎಂಬುದಕ್ಕೆ ಕೆಲವು ಗಂಟೆಗಳಲ್ಲಿಯೇ ಉತ್ತರ ಸಿಗಲಿದೆ.
PublicNext
02/08/2021 03:58 pm