ನವದೆಹಲಿ: ಕಾಶ್ಮೀರದಲ್ಲಿ ಕಪ್ಪು ಹಿಮ ಬಿದ್ದಾಗ ಬಿಜೆಪಿ ಸೇರುವೆ ಎಂದು ಕಾಂಗ್ರೆಸ್ ಮುಖಂಡ ಗುಲಾಬ್ ನಬಿ ಆಜಾದ್ 'ಕಮಲ' ಪಡೆ ಸೇರುವ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರು ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಗುಲಾಂ ನಬಿ ಆಜಾದ್ ಅವರ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದ್ದರು. "ಗುಲಾಂ ನಬಿ ನನ್ನ ಆತ್ಮೀಯ ಸ್ನೇಹಿತ" ಎಂದು ಕಣ್ಣೀರು ಹಾಕಿದ್ದರು. ಪಕ್ಷದ ಬಗ್ಗೆ ಮಾತ್ರವಲ್ಲದೇ ದೇಶದ ಬಗ್ಗೆ ಅವರು ಚಿಂತಿಸುತ್ತಿದ್ದರು ಎಂದು ಹೊಗಳಿದ್ದರು. ಹೀಗಾಗಿ ಗುಲಾಬ್ ನಬಿ ಆಜಾದ್ ಅವರು ಬಿಜೆಪಿ ಸೇರುವರೆಂಬ ವದಂತಿ ಹರಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಗುಲಾಂ ನಬಿ ಆಜಾದ್, "ಕಾಶ್ಮೀರದಲ್ಲಿ ಯಾವಾಗ ಕಪ್ಪು ಹಿಮ ಬೀಳುತ್ತದೋ ಆಗ ನಾನು ಬಿಜೆಪಿ ಸೇರುತ್ತೇನೆ. ಪ್ರಧಾನಿ ಮೋದಿ ಅವರು ನನಗೆ 90ರ ದಶಕದಿಂದಲೂ ತಿಳಿದಿದ್ದಾರೆ. ಕೆಲವು ಟಿವಿ ಚರ್ಚೆಗಳಲ್ಲೂ ನಾವು ಭಾಗವಹಿಸಿದ್ದೆವು. ಜಗಳ ಆಡುತ್ತಿದ್ದೆವು, ಒಟ್ಟಿಗೆ ಟೀ ಕುಡಿಯುತ್ತಿದ್ದೆವು. ಹಾಗೆಂದು ನಾನು ಬಿಜೆಪಿ ಸೇರುವುದಿಲ್ಲ'' ಎಂದು ತಿಳಿಸಿದ್ದಾರೆ.
PublicNext
12/02/2021 03:44 pm