ಚಿಕ್ಕಮಗಳೂರು: ಬಿಜೆಪಿಯೊಳಗೆ ಹೊಸ ಬಂಡಾಯ ಬೂದಿ ಮುಚ್ಚಿದ ಸ್ಥಿತಿಯಲ್ಲಿದ್ದು, ರೆಸಾರ್ಟ್ ಶುರುವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬಿಜೆಪಿಯೊಳಗೆ ಒಂದೆರಡಲ್ಲ, ಹಲವು ಬಣಗಳು ರೂಪುಗೊಂಡಂತೆ ತೋರುತ್ತಿವೆ. ಮಂತ್ರಿಗಿರಿ ಕೈತಪ್ಪಿಸಿಕೊಂಡವರು ಒಂದೆಡೆಯಾದರೆ, ಸಚಿವ ಸ್ಥಾನ ಸಿಕ್ಕು ಖಾತೆ ಬಗ್ಗೆ ಬೇಸರ ಹೊಂದಿರುವರದ್ದು ಇನ್ನೊಂದೆಡೆ ಪ್ರಮುಖ ಗುಂಪುಗಳಾಗಿದೆ. ಈ ಎಲ್ಲ ಬೆಳವಣಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಲೆನೋವು ತಂದಿದೆಯಂತೆ.
ಖಾತೆ ಮರುಹಂಚಿಕೆ ದಿನ ಎಂಟಿಬಿ ನಾಗರಾಜ್, ಮುನಿರತ್ನ, ಗೋಪಾಲಯ್ಯ ಅವರು ಸಚಿವ ಡಾ. ಕೆ.ಸುಧಾಕರ್ ಮನೆಯಲ್ಲಿ ಸಭೆ ನಡೆಸಿದ್ದರು. ಇದೀಗ ಚಿಕ್ಕಮಗಳೂರು ಹೊರವಲಯದಲ್ಲಿರುವ ಪ್ರತಿಷ್ಠಿತ ಸರಾಯ್ ರೆಸಾರ್ಟ್ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲ ಮುಖಂಡರ ಗೌಪ್ಯ ಸಭೆ ನಡೆಯುತ್ತಿದೆ.
ಈ ಸಭೆಯಲ್ಲಿ ಸಿ.ಪಿ. ಯೋಗೇಶ್ವರ್, ಗೋಪಾಲಯ್ಯ, ಶಾಸಕ ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿರುವುದು ವಿಶೇಷ. ಇವರೆಲ್ಲರೂ ಶುಕ್ರವಾರ ರಾತ್ರಿಯೇ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವುದು ತಿಳಿದುಬಂದಿದೆ. ರಮೇಶ್ ಜಾರಕಿಹೊಳಿ ನೇತೃತ್ವದ ಈ ಸಭೆಯಲ್ಲಿ ಮೂಲ ಬಿಜೆಪಿಗರೂ ಪಾಲ್ಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
PublicNext
23/01/2021 02:42 pm