ವಿಜಯಪುರ: ವೈಯಕ್ತಿಕ ಭದ್ರತಾ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ದಿಢೀರನೆ ಹಿಂಪಡೆದುಕೊಂಡಿರುವುದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಿಎಂ ಯಡಿಯೂರಪ್ಪ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ‘ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಗಳಾದರೆ ಅಥವಾ ಅನಾಹುತಗಳು ಆದಲ್ಲಿ ಅದಕ್ಕೆ ಆಡಳಿತ ನಡೆಸುತ್ತಿರುವ ತಾವು ಮತ್ತು ಸರ್ಕಾರ ಹೊಣೆಯಾಗುತ್ತೀರಿ. ನಾನು ಪ್ರಖರ ಹಿಂದುಪರವಾದ ಮತ್ತು ಜನಪರ ಹೋರಾಟ ಮತ್ತು ಸಂಘಟನೆಯಲ್ಲಿ ತೊಡಗಿಸಿಕೊಂಡಿರುವೆ. ಹೀಗಾಗಿ ಈ ಹಿಂದೆ ನನ್ನ ಮೇಲೆ ಅನೇಕ ಬಾರಿ ಕೆಲವು ಹಿಂದೂ ವಿರೋಧಿ ಸಂಘಟನೆಗಳು ಮತ್ತ ಮತಾಂಧ ಶಕ್ತಿಗಳು ದಾಳಿ ಮಾಡುವ ದುರುದ್ದೇಶದ ಮುನ್ಸೂಚನೆಯನ್ನು ಅರಿತ ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ನನಗೆ ಸೂಕ್ತ ಭದ್ರತೆ ಒದಗಿಸಲಾಗಿತ್ತು. ಆದರೆ ನಾನು ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ ಸೇಡಿನ ರಾಜಕಾರಣ ಮಾಡಿ ಭದ್ರತೆ ಹಿಂಪಡೆಯಲಾಗಿದೆ’ ಎಂದು ಆರೋಪಿಸಿದ್ದಾರೆ.
‘ನನ್ನ ಹೋರಾಟದ ನಿಲುವಿನಿಂದ ಆಗಬಹುದಾದ ಅನಾಹುತಗಳನ್ನು ತಡೆಯಲು ಸರ್ಕಾರ ಈ ಮೊದಲೇ ನನಗೆ ಪೊಲೀಸ್ ರಕ್ಷಣೆಯನ್ನು ಒದಗಿಸಿತ್ತು. ಆದರೆ ದಿಢೀರನೆ ಪೊಲೀಸ್ ಭದ್ರತೆ ಹಿಂಪಡೆದಿರುವುದರ ಹಿಂದಿನ ದುರುದ್ದೇಶ ಗೊತ್ತು. ಇದು ತಮ್ಮ ಹಳೇ ಚಾಳಿ ಮತ್ತು ವಿಕೃತ ಮನಸ್ಸನ್ನು ಬಿಂಬಿಸುತ್ತದೆ. ಇದರಿಂದ ಹಿಂದುಪರ, ಜನಪರ ಹಾಗೂ ಅನ್ಯಾಯದ ವಿರುದ್ಧದ ನನ್ನ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಸರ್ಕಾರದ ರಕ್ಷಣೆಯನ್ನು ನಂಬಿ ನಾನು ಹೋರಾಟ ಮಾಡುತ್ತಿಲ್ಲ. ನನ್ನ ಹೋರಾಟ ನಿರಂತರವಾಗಿರುತ್ತದೆ’ ಎಂದು ತಿಳಿಸಿದ್ದಾರೆ.
PublicNext
15/01/2021 07:55 pm