ಮಂಗಳೂರು: ಭಾವನಾತ್ಮಕವಾಗಿ ಜನರನ್ನು ಕೆರಳಿಸುವುದು ಆಡಳಿತ ಅಲ್ಲ ಎಂದು ಮಾಜಿ ಸಚಿವ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ದೊಡ್ಡ ದೊಡ್ಡ ಕಂಪನಿಗಳಿಗೆ, ಸಂಸ್ಥೆಗಳಿಗೆ ಸರ್ಕಾರಿ ಜಾಗವನ್ನು ಸಕ್ರಮ ಮಾಡಿ ಕೊಟ್ಟಿದೆ ಅಲ್ವಾ..? ಅದೇ ರೀತಿ ಪುರಾತನ ಇತಿಹಾಸ ಹೊಂದಿರುವ, ಜನರಿಗೆ ಯಾವುದೇ ತೊಂದರೆ ಕೊಡದ ಧಾರ್ಮಿಕ ಕೇಂದ್ರಗಳಿರುವ ಸ್ಥಳವನ್ನು ಯಾಕೆ ಸಕ್ರಮಗೊಳಿಸಬಾರದು ಎಂದು ಪ್ರಶ್ನಿಸಿದರು.
ಸಂಕಷ್ಟದ ಕಾಲದಲ್ಲಿರುವಾಗ ಎಲ್ಲಾ ಆಸೆಯನ್ನು ಕೈಚೆಲ್ಲಿ ಜನರು ದೇವರ ಮೊರೆ ಹೋಗಿ ದೇವರ ಆಶ್ರಯ ಬಯಸುವಾಗ ಸರ್ಕಾರ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಬಿಜೆಪಿ ಸರ್ಕಾರ ವಿಫಲವಾಗಿದೆ ಅಂದರು. ಹೀಗಾಗಿ ಜನರು ಬಿಜೆಪಿಯ ನಿಜವಾದ ಮುಖವಾಡವನ್ನು ಅರಿಯಬೇಕಾಗಿದೆ. ಇನ್ನು ಮುಂದೆ ನಮ್ಮ ಮಕ್ಕಳಲ್ಲಿ ಬಿಜೆಪಿ ಸರ್ಕಾರವು ಧಾರ್ಮಿಕ ಕೇಂದ್ರಗಳನ್ನು ಧ್ವಂಸ ಮಾಡಿದೆ ಎಂಬ ಪಾಠವನ್ನು ಓದಬೇಕಾದ ಕಪ್ಪುಚುಕ್ಕೆಯನ್ನು ಇವರು ಮೂಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
200 ವರ್ಷಗಳ ಇತಿಹಾಸ ಇರುವಂತಹ ಅನೇಕ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆಯನ್ನು ಅರಿಯಲು ಸಾಧ್ಯವಾಗದ ಬಿಜೆಪಿ ಸರ್ಕಾರ ಯಾವ ರೀತಿಯ ಆಡಳಿತ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು. ಧಾರ್ಮಿಕ ಕೇಂದ್ರಗಳ ಧ್ವಂಸ ವಿಚಾರ ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಕಪ್ಪುಚುಕ್ಕೆ. ಕೂಡಲೇ ಮೈಸೂರು ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಬಿಜೆಪಿ ನಾಯಕರು ಬಾಲಿಶವಾದ ಹೇಳಿಕೆ ನೀಡುತ್ತಿದ್ದಾರೆ. ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಧಾರ್ಮಿಕ ಕೇಂದ್ರಗಳನ್ನು ಕೆಡವಿದ್ದೇ ತಪ್ಪೇ. ಇನ್ನು ಇದರ ಹೊಣೆಯನ್ನು ಅಧಿಕಾರಿಗಳ ಮೇಲೆ ಹಾಕುವುದು ಇನ್ನೊಂದು ತಪ್ಪು ಎಂದರು.
PublicNext
15/09/2021 04:23 pm