ಬೆಂಗಳೂರು: ಮಳೆಯಿಂದ ಹಾನಿಯಾದ ಮನೆಗಳಿಗೆ ತಕ್ಷಣ 10 ಸಾವಿರ ರೂ. ಪರಿಹಾರ ನೀಡುವಂತೆ ಸೂಚಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಅತಿವೃಷ್ಟಿಯಾಗಿರುವ 16 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಹಲವಾರು ಸೂಚನೆಗಳನ್ನು ನೀಡಲಾಗಿದೆ. ಬೆಂಗಳೂರು- ಮೈಸೂರಿನ ಆಯುಕ್ತರು, ಮಂಡ್ಯ ಹಾಗೂ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಲು ಹೇಳಿದ್ದೇನೆ ಎಂದರು.
ಕೆರೆಕಟ್ಟೆಗಳಿರುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಮಳೆ ಹಾನಿ ಪರಿಹಾರ ನೀಡಲು ಹಿಂದೆ ಮುಂದೆ ನೋಡಬಾರದು. ಬಿದ್ದಿರುವ ವಿದ್ಯುತ್ ಕಂಬಗಳನ್ನ 24 ಗಂಟೆಗಳಲ್ಲಿ ದುರಸ್ತಿಗೊಳಿಸುವಂತೆ ಬೆಸ್ಕಾಂಗೆ ಸೂಚನೆ ನೀಡಲಾಗಿದೆ. ಜಲಾವೃತ ಪ್ರದೇಶಗಳಲ್ಲಿನ ಜನರಿಗೆ ಆಶ್ರಯ ನೀಡಲು ಸೂಚಿಸಲಾಗಿದ್ದು, ಎಲ್ಲ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 900 ಕೋಟಿ ರೂ. ಇದೆ. ಬೆಳೆ ಸಮೀಕ್ಷೆ ಮಾಡಿ, ಪರಿಹಾರಕ್ಕೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಕಳೆದ ಜೂನ್ ಜುಲೈನಲ್ಲಿ ಆಗಿರುವ ಬೆಳೆ ನಾಶಕ್ಕೆ ಬರುವ ವಾರದೊಳಗೆ ಪರಿಹಾರ ವಿತರಣೆ ಪ್ರಾರಂಭವಾಗುತ್ತದೆ. ಆಗಸ್ಟ್ ಮೊದಲ ವಾರ ಹಾಗೂ ಈಗ ಆಗಿರುವ ಮಳೆಯ ಹಾನಿ ಬಗ್ಗೆ ಸಮೀಕ್ಷೆಯಾದ ಕೂಡಲೇ ಅವುಗಳಿಗೆ ಪರಿಹಾರ ನೀಡಲಾಗುವುದು. ಸೇತುವೆ, ರಸ್ತೆ ಮುಂತಾದ ಮೂಲಸೌಕರ್ಯ ಹಾನಿಗೆ ಕೂಡಲೇ ದುರಸ್ತಿ ಮಾಡುವುದು ಹಾಗೂ ವಿದ್ಯುತ್ ಕಂಬಗಳು ಬಿದ್ದಿರುವೆಡೆಗಳಲ್ಲಿ ಸಂಪರ್ಕ ಒದಗಿಸಲು ಎಲ್ಲಾ ಎಸ್ಕಾಂ ಗಳಿಗೆ ಸೂಚನೆ ನೀಡಲು ಡಿಸಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
PublicNext
29/08/2022 03:22 pm