ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಶನಿವಾರ ಬಂಧನಕ್ಕೊಳಗಾಗಿರುವ ಮರಾಠಿ ನಟಿ ಕೇತಕಿ ಚಿತಳೆ ಅವರನ್ನು ಕೋರ್ಟ್ ಮೇ 18 ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಮರಾಠಿ ಭಾಷೆಯಲ್ಲಿರುವ ಪೋಸ್ಟ್ ಅನ್ನು ಚಿತಳೆ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 'ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ, ನಿಮಗಾಗಿ ನರಕ ಕಾಯುತ್ತಿದೆ’ ಎಂದು ಅದರಲ್ಲಿ ಬರೆಯಲಾಗಿತ್ತು. ಚಿತಳೆ ಅವರಲ್ಲದೆ ಫಾರ್ಮಸಿ ವಿದ್ಯಾರ್ಥಿ ನಿಕಿಲ್ ಭಾಮ್ರೆ ಎಂಬುವವರನ್ನೂ ಬಂಧಿಸಲಾಗಿದೆ.
ಈ ಸಂಬಂಧ ನಟಿ ವಿರುದ್ಧ 'ಸ್ವಪ್ನಿಲ್ ನೆಟ್ಕೆ ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಥಾಣೆಯ ಕಲ್ವಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಟಿ ಕೇತಕಿ ಚಿತಳೆ ಅವರನ್ನು ಥಾಣೆ ಪೊಲೀಸರ ಅಪರಾಧ ವಿಭಾಗದ ಪೊಲೀಸರು ನವಿ ಮುಂಬೈನಲ್ಲಿ ಬಂಧಿಸಿದ್ದರು.
PublicNext
15/05/2022 06:54 pm