ಹುಬ್ಬಳ್ಳಿ: ಉಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ಹಂತದ ನ್ಯಾಯಾಲಯಗಳಲ್ಲಿ, ಬಾಕಿ ಇರುವ 5ರಿಂದ 10 ವರ್ಷದ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ವಿಚಾರಣೆಗೆ ಒಳಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ್ ತಿಳಿಸಿದ್ದಾರೆ.
ಹುಬ್ಬಳ್ಳಿಯ ನೂತನ ನ್ಯಾಯಾಲಯ ಆವರಣದಲ್ಲಿ 9.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕದ ತರುವಾಯ ನ್ಯಾಯಾಲಯಗಳು ಪುನಃ ಕಾರ್ಯಾಚರಣೆಯನ್ನು ಆರಂಭಿಸಿವೆ. ತ್ವರಿತವಾಗಿ ನ್ಯಾಯದಾನ ನೀಡುವ ಹಿನ್ನೆಲೆಯಲ್ಲಿ ಹಳೆಯ ವ್ಯಾಜ್ಯಗಳ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ನ್ಯಾಯಾಧೀಶರುಗಳಿಗೆ ಸೂಚನೆ ನೀಡಲಾಗಿದೆ. ಶೇ.50 ರಷ್ಟು ಪ್ರಕರಣಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ವಾದಿ ಅಥವಾ ಪ್ರತಿವಾದಿಯಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಪ್ರಕರಣಗಳು ಇರಬಾರದು. ವ್ಯಾಜ್ಯಗಳನ್ನು ತ್ವರಿತವಾಗಿ ಪರಿಹರಿಸುವಲ್ಲಿ ವಕೀಲರ ಸಹಾಯ ಅಗತ್ಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ನ್ಯಾಯಾಲಯಗಳಲ್ಲಿ ಉತ್ತಮ ಸೌಲಭ್ಯಗಳಿವೆ. 35ರಿಂದ 40 ನ್ಯಾಯಾಲಯಗಳಲ್ಲಿ ಹೆಚ್ಚಿನ ಸೌಕರ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಕೋರಲಾಗಿದೆ.
ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣ ದೇಶದಲ್ಲಿ ಮಾದರಿ ಸಂಕೀರ್ಣವಾಗಿದೆ. ಇದರ ಆವರಣದಲ್ಲಿ ಉತ್ತಮ ಸೌಲಭ್ಯಗಳುಳ್ಳ ವಕೀಲರ ಭವನ ನಿರ್ಮಿಸಲಾಗಿದೆ. ಇದರ ಸದುಪಯೋಗವಾಗಬೇಕು. ವಕೀಲರು ನಿರ್ಭೀತರಾಗಿ ಕಾರ್ಯನಿರ್ವಹಿಸಬೇಕು. ಸಂವಿಧಾನದ 21ನೇ ವಿಧಿಯ ಅನ್ವಯ ನಾಗರಿಕರಿಗೆ ನೀಡಿರುವ ಸ್ವಾತಂತ್ರ್ಯ ರಕ್ಷಣೆಯಲ್ಲಿ ವಕೀಲರ ಪಾತ್ರ ಮಹತ್ವವಾದದ್ದು. ಸ್ವಾತಂತ್ರ್ಯ ಹೋರಾಟ ಹಾಗೂ ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಕೀಲರು ಮುಖ್ಯಪಾತ್ರವನ್ನು ನಿಭಾಯಿಸಿದ್ದಾರೆ. ಮಾಧ್ಯಮ ವಿಚಾರಣೆಗಳ ಸಂಪ್ರದಾಯಕ್ಕೆ ಪ್ರತಿಯಾಗಿ ವಕೀಲರು ಹಾಗೂ ನ್ಯಾಯಾಲಯಗಳು ತಮ್ಮ ಪಾತ್ರವನ್ನು ಗಟ್ಟಿ ಧ್ವನಿಯಲ್ಲಿ ಎತ್ತಿ ಹೇಳಬೇಕಾಗಿದೆ. ನ್ಯಾಯಾಲಯ ಹಾಗೂ ವಕೀಲರ ಸಂಘ ಸಹಕಾರದಿಂದ ಕರ್ತವ್ಯ ನಿರ್ವಹಿಸಿದರೆ ನಾಗರಿಕರಿಗೆ ಉತ್ತಮ ನ್ಯಾಯ ದೊರಕಲಿದೆ ಎಂದು ಅಭಿಪ್ರಾಯಪಟ್ಟರು.
ಗೃಹ ಹಾಗೂ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಇಡೀ ರಾಜ್ಯದಲ್ಲಿ ಅತಿದೊಡ್ಡ ಹಾಗೂ ಮಾದರಿಯಾದ ವಕೀಲರ ಸಂಘ ಕಟ್ಟಡ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಿರುವುದು ಸಂತಸ ತಂದಿದೆ. ಹಿಂದೆ ಹಂಚಿನ ಕಟ್ಟಡದಲ್ಲಿ ಹುಬ್ಬಳ್ಳಿಯ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿತ್ತು. ಈಗ ಸುಸಜ್ಜಿತ ನ್ಯಾಯಾಲಯ ತಲೆ ಎತ್ತಿದೆ, ಅದಕ್ಕೆ ಪೂರಕವಾಗಿ ವಕೀಲರ ಸಂಘವೂ ಕೂಡ ಸುಸಜ್ಜಿತವಾಗಿ ನಿರ್ಮಾಣವಾಗಿದೆ. ಈ ಕಟ್ಟಡ ಅಧ್ಯಯನ, ಉಪನ್ಯಾಸ, ಸಂವಾದ, ಚರ್ಚೆಗಳಿಗೆ ಸಾಕ್ಷಿಯಾಗಿ ವಕೀಲರ ವೃತ್ತಿ ಸಾಮರ್ಥ್ಯ ಹೆಚ್ಚಿಸುವಂತಾಗಲಿ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವುದರಲ್ಲಿ ನ್ಯಾಯಾಂಗ ಮಹತ್ವದ ಪಾತ್ರ ವಹಿಸುತ್ತ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಾನೂನುಗಳಲ್ಲಿನ ದ್ವಂದ್ವಗಳನ್ನು ನಿವಾರಣೆ ಮಾಡಿ ಸ್ಪಷ್ಟತೆಯನ್ನು ತರಲಾಗುವುದು. ಸಾರ್ವಜನಿಕರ ಕಲ್ಯಾಣಕ್ಕಾಗಿ ಸರ್ಕಾರ ಮತ್ತು ನ್ಯಾಯಾಂಗ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಮಾತನಾಡಿ, ನ್ಯಾಯಾಂಗ ವೃತ್ತಿಯು ಪ್ರತಿಷ್ಠಿತ ಮತ್ತು ಪವಿತ್ರ ಕರ್ತವ್ಯವಾಗಿದೆ. ತಾವು ಮತ್ತು ತಂದೆಯವರು ಇದೇ ವಕೀಲಿ ವೃತ್ತಿಯ ಹಿನ್ನೆಲೆಯಿಂದ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಹುಬ್ಬಳ್ಳಿಯ ನ್ಯಾಯಾಲಯ ಹಾಗೂ ವಕೀಲರ ಸಂಘ ಎರಡೂ ಕಟ್ಟಡಗಳೂ ನಾಡಿಗೆ ಮಾದರಿಯಾಗಿವೆ. ಕರ್ನಾಟಕದ ಎಲ್ಲಾ ಸರ್ಕಾರಗಳು ನ್ಯಾಯಾಂಗಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಮುಕ್ತ ಮನಸ್ಸಿನಿಂದ ಒದಗಿಸುತ್ತ ಬಂದಿವೆ. ಆಡಳಿತಾತ್ಮಕ, ಪ್ರಜಾತಾಂತ್ರಿಕ ವ್ಯವಸ್ಥೆ ಸಶಕ್ತಗೊಳಿಸಲು ನ್ಯಾಯಾಂಗ ಕೊಡುಗೆ ನೀಡುತ್ತಿದೆ. ತ್ವರಿತ ನ್ಯಾಯದಾನ ಇಂದಿನ ಅಗತ್ಯವಾಗಿದೆ. ಸರ್ಕಾರ ಮತ್ತು ಸಾರ್ವಜನಿಕರ ಮಧ್ಯೆ ಇರುವ ಹಲವಾರು ವ್ಯಾಜ್ಯಗಳನ್ನು ಹೆಚ್ಚು ಹೆಚ್ಚು ಲೋಕ ಅದಾಲತ್ ಮಾದರಿಗಳನ್ನು ಆಯೋಜಿಸಬೇಕು. ತಮ್ಮ ಇಲಾಖೆ ವ್ಯಾಪ್ತಿಯ ಕೆಐಎಡಿಬಿ ವ್ಯಾಜ್ಯಗಳನ್ನು ಕೈಗಾರಿಕಾ ಅದಾಲತ್ ಮೂಲಕ ಪರಿಹರಿಸುವ ಕ್ರಮವಹಿಸಲಾಗಿದೆ. ಎಸ್.ಆರ್.ಬೊಮ್ಮಾಯಿ ಹಾಗೂ ತಾವು ಸೇರಿ ಇಬ್ಬರು ಮುಖ್ಯಮಂತ್ರಿಗಳನ್ನು ಹುಬ್ಬಳ್ಳಿ ವಕೀಲರ ಸಂಘ ನೀಡಿದೆ. ವಕೀಲಿ ವೃತ್ತಿ ಬಹಳ ಖುಷಿ ನೀಡಿದೆ. ಮತ್ತೆ ನ್ಯಾಯವಾದಿಯಾಗಿ ಕಕ್ಷಿದಾರರ ಸೇವೆಗೈಯುವ ಇಚ್ಛೆ ಇದೆ ಎಂದು ತಮ್ಮ ಮನದಿಂಗಿತ ವ್ಯಕ್ತಪಡಿಸಿದರು.
PublicNext
30/01/2021 03:41 pm