ಅದಮಾರು: 2 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಕ್ಕಳಿಗೆ ಲಸಿಕೆ ನೀಡಲು ಕೊನೆಯ ಸರ್ಟಿಫಿಕೇಶನ್ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಅದಮಾರುವಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ,ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರಕಾರದ ಸಕ್ಷಮ ಪ್ರಾಧಿಕಾರದ ಸರ್ಟಿಫಿಕೇಶನ್ ಬರಬೇಕಾಗಿದೆ. ರಾಜ್ಯದಲ್ಲಿ ಶೇ. 82 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಶೇ. 90 ಮೊದಲ ಡೋಸ್ ಪೂರೈಸುತ್ತೇವೆ.ಎರಡನೇ ಡೋಸ್‌ಅನ್ನು ಡಿಸೆಂಬರ್ ಅಂತ್ಯದೊಳಗೆ ಶೇ. 70 ಪೂರ್ಣ ಮಾಡುತ್ತೇವೆ. 2 ರಿಂದ 18 ವರ್ಷದೊಳಗಿನ ಮಕ್ಕಳ ರಕ್ಷಣೆ ಮಾಡಬೇಕಾಗಿದೆ. ಅಂತಿಮ ನಿರ್ಧಾರ ಆದ ತಕ್ಷಣ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ಕೊಡುತ್ತೇವೆ ಎಂದು ಹೇಳಿದ್ದಾರೆ.
ಕರಾವಳಿಯಲ್ಲಿ ಗೋಹತ್ಯೆ- ಮತಾಂತರ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಗೋಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಬಹಳಷ್ಟು ಚಿಂತನೆ ಮಾಡುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಮತಾಂತರ ಕಾನೂನು ಹೇಗಿದೆ ಎಂಬುವುದನ್ನು ಅಭ್ಯಾಸ ಮಾಡುತ್ತಿದ್ದೇವೆ. ಆದಷ್ಟು ಶೀಘ್ರ ಕಾನೂನು ತರಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ರಹಸ್ಯ ಮಾತುಕತೆ ಕುರಿತ ಪ್ರಶ್ನೆಗೆ ಉತ್ತರಿಸಲು ಸಿಎಂ ನಿರಾಕರಿಸಿದರು.
PublicNext
13/10/2021 01:56 pm