ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ‘ಪೇಸಿಎಂ’ ಪೋಸ್ಟರ್ ಅಂಟಿಸಿ ಅಭಿಯಾನ ನಡೆಸಿದ ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲವಾಗಿರುವ ಬಿಜೆಪಿ, ಇದೀಗ ‘ಸ್ಕ್ಯಾಮ್ ರಾಮಯ್ಯ’ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಿ ಆಕ್ರೋಶ ಹೊರ ಹಾಕಿದೆ.
ಕಾಂಗ್ರೆಸ್ ಅಧಿಕಾರವಧಿಯ ಭ್ರಷ್ಟಾಚಾರ ಕುರಿತು ಬಿಜೆಪಿ ಹೊರತಂದಿರುವ ‘ಸ್ಕ್ಯಾಮ್ ರಾಮಯ್ಯ’ ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಬಿಡುಗಡೆ ಮಾಡಿದರು.
ಪುಸ್ತಕದಲ್ಲಿರುವ ಆರೋಪಕ್ಕೆ ಸೂಕ್ತ ದಾಖಲೆಗಳು ಅದರಲ್ಲಿ ಇಲ್ಲವಾದರೂ ಮಾಧ್ಯಮಗಳಲ್ಲಿ ಬಂದ ಪೇಪರ್ ವರದಿಯನ್ನು ಮುದ್ರಿಸಲಾಗಿದೆ. ಸುಮಾರು 28 ಪುಟಗಳ ಪುಸ್ತಕದಲ್ಲಿ ಸಿದ್ದರಾಮಯ್ಯರ ಅಧಿಕಾರಾವಧಿಯಲ್ಲಿನ ಹಗರಣಗಳ ಬಗ್ಗೆ ಪ್ರಸ್ತಾಪವಿದೆ.
ಅರ್ಕಾವತಿ ಹಗರಣ, ಸ್ಲಂಬೋರ್ಡ್ ಹಗರಣ, ಬಿಬಿಎಂಪಿ ಕಸ ಹಗರಣ, ಆಹಾರ ಇಲಾಖೆ ಹಗರಣ, ಹಾಸಿಗೆ ದಿಂಬು ಹಗರಣ, ಹ್ಯೂಬ್ಲೋಟ್ ಹಗರಣ, ಜಮಮಾಲಾ ಮೊಟ್ಟೆ ಹಗರಣ, ಗಣಿ ಹಗರಣ, ಬಿಲ್ ಎತ್ತುವಳಿ ದಂಧೆ, ಮರಳು ಲೂಟಿ ಹಗರಣ, ಎಸ್ಸಿ ಎಸ್ಟಿ ಅನುದಾನದಲ್ಲಿ ಹಗರಣ, ಗೋವಿಂದರಾಜ್ ಡೈರಿ ಹಗರಣ, ಲ್ಯಾಪ್ ಟ್ಯಾಪ್ ಹಗರಣ, ಕಲ್ಲಿದ್ದಲು ಹಗರಣ, ಮೆಗಾ ಬೋರ್ವೆಲ್ ಹಗರಣ… ಹೀಗೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸಿದ್ದರಾಮಯ್ಯರನ್ನು ಬಿಜೆಪಿ ಅಣಕಿಸಿದೆ.
‘ಪೇಸಿಎಂ’ ಪೋಸ್ಟರ್ ಅನ್ನು ನಾನೇ ಅಂಟಿಸುತ್ತೇನೆ. ತಾಕತ್ ಇದ್ರೆ ನನ್ನನ್ನು ಅರೆಸ್ಟ್ ಮಾಡಲಿ ಎಂದ ಸಿದ್ದರಾಮಯ್ಯ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಸಿದ್ದರಾಮಯ್ಯ ಪೋಸ್ಟರ್ ಅಂಟಿಸುವ ಪ್ರಕರಣದಲ್ಲಿ ಅರೆಸ್ಟ್ ಅಲ್ಲ, ಬೇರೆ ಕೇಸ್ಗಳಲ್ಲೂ ಶೀಘ್ರವೇ ಜೈಲಿಗೆ ಹೋಗ್ತಾರೆ ಎಂದರು.
PublicNext
22/09/2022 05:09 pm